1:11 PM Wednesday 29 - October 2025

ಸರಣಿ ಕಳ್ಳತನದ ಆರೋಪಿ, ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

suresh k poojary
26/08/2023

ದಕ್ಷಿಣ ಕನ್ನಡ ಜಿಲ್ಲೆಯ ಮುಂಡಾಜೆ, ಕಕ್ಕಿಂಜೆ, ಉಜಿರೆ, ಸೋಮಂತಡ್ಕ, ಕಲ್ಮಂಜ, ಕನ್ಯಾಡಿ, ಗುರುವಾಯನಕೆರೆ ನೆರಿಯ, ವೇಣೂರು ಮೊದಲಾದೆಡೆ ಸರಣಿ ಕಳ್ಳತನಗೈದಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಸುರೇಶ ಕೆ. ಪೂಜಾರಿ (50) ಎಂದು ಗುರುತಿಸಲಾಗಿದೆ. ಈತ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟಿಯೊಂದನ್ನು ಕಳ್ಳತನಗೈದು ಅದರಲ್ಲಿ ಸುತ್ತಾಡುತ್ತಾ ಒಬ್ಬಂಟಿಯಾಗಿ ರಾತ್ರಿವೇಳೆ ಹಲವೆಡೆ ಕಳ್ಳತನ ಕೃತ್ಯವೆಸಗುತ್ತಿದ್ದನೆಂದು ತನಿಖೆಯಿಂದ ದೃಢಪಟ್ಟಿದೆ. ಇದೇ ಆ.9 ರಂದು ಸೋಮಂತಡ್ಕ ಪೇಟೆಯ ಪ್ರಸನ್ನ ಪ್ರಾವಿಜನ್ ಸ್ಟೋರ್‌ನ ಬಾಗಿಲು ಮುರಿದು ಡ್ರಾವರ್ ನಲ್ಲಿಟ್ಟಿದ್ದ 50 ಸಾವಿರ ರೂ ನಗದು ಕಳ್ಳತನ ಗೈದಿರುವ ಬಗ್ಗೆ ಮಾಲಿಕ ಪ್ರಸನ್ನ ಆರಿಗ ಅವರು ಠಾಣೆಗೆ ನೀಡಿದ್ದ ದೂರಿನ ವಿಚಾರಣೆಗಾಗಿ ಸಿದ್ದಗೊಳಿಸಿದ್ದ ಪೊಲೀಸ್ ತಂಡ ಈ ಅರೋಪಿಯನ್ನು ಬಲೆಗೆ ಕೆಡವಿದೆ.

ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಅವರ ಮಾರ್ಗದರ್ಶನದಲ್ಲಿ ಎಸ್.ಐ ಗಳಾದ ಅನೀಲಕುಮಾರ ಡಿ, ಸಮರ್ಥ ಗಾಣಿಗೇರ್, ಲೋಲಾಕ್ಷ ಪಿ ರವರ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

ಆರೋಪಿಯು ಕುಖ್ಯಾತ ಕಳ್ಳನಾಗಿದ್ದು ಈಗಾಗಲೇ ಈತನ ವಿರುದ್ದ ಕಾರ್ಕಳ ಗ್ರಾಮಾಂತರ ಠಾಣೆ, ಶಿರ್ವ, ಹಿರಿಯಡಕ, ಪಡುಬಿದ್ರಿ, ಮುಲ್ಕಿ, ಹೆಬ್ರಿ, ಉಡುಪಿ ನಗರ, ದಾವಣಗೆರೆ ಗ್ರಾಮಾಂತರ ಮತ್ತು ಬೆಳಗಾಂ ಮಾರ್ಕೆಟ್‌ ಪೊಲೀಸ್‌ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿವೆ.

ಇತ್ತೀಚಿನ ಸುದ್ದಿ

Exit mobile version