ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ: ಆರೋಪಿ ಪೊಲೀಸ್ ವಶಕ್ಕೆ

ಕಡಬ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಯುವಕ ಕೇರಳ ಮೂಲದ ಎಂಬಿಎ ವಿದ್ಯಾರ್ಥಿ ಅಬೀನ್ ಎಂದು ತಿಳಿದು ಬಂದಿದೆ. ಆ್ಯಸಿಡ್ ದಾಳಿಯಲ್ಲಿ ವಿದ್ಯಾರ್ಥಿನಿಯರಾದ ಅಲಿನ ಸಿಬಿ, ಅರ್ಚನಾ, ಅಮೃತಾ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆರೋಪಿಯು 17 ವರ್ಷ ವಯಸ್ಸಿನ ಅಲಿನ ಸಿಬಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು, ಈ ವೇಳೆ ಆಕೆಯ ಸಮೀಪದಲ್ಲಿದ್ದ ಅರ್ಚನ ಮತ್ತು ಅಮೃತ ಕೂಡ ಗಾಯಗೊಂಡಿದ್ದಾರೆನ್ನಲಾಗಿದೆ.
ಆರೋಪಿಯು ಮಾಸ್ಕ್ ಧರಿಸಿ ಕಾಲೇಜಿನ ಆವರಣದೊಳಗೆ ಎಂಟ್ರಿ ಕೊಟ್ಟಿದ್ದಾನೆ. ಆ್ಯಸಿಡ್ ದಾಳಿಯ ನಂತರ ಆರೋಪಿ ಪರಾರಿಯಾಗಲು ಯತ್ನಿಸಿದ ವೇಳೆ ಕಾಲೇಜು ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಆ್ಯಸಿಡ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಮೂವರು ವಿದ್ಯಾರ್ಥಿನಿಯರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.