ಸೌಜನ್ಯ ಪ್ರಕರಣದಲ್ಲಿ ಇಲ್ಲಿ ಪೊಲೀಸರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ: ಮೈಸೂರಿನ ಒಡನಾಡಿ ಸಂಸ್ಥೆಯ ಶ್ರೀನಿವಾಸ್ ಹೇಳಿಕೆ
- ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನ್ಯಾಯ ಬದ್ಧ ತನಿಖೆಗೆ ಅಂಬೇಡ್ಕರ್ ಯುವ ಸೇನೆ ಪ್ರತಿಭಟನೆ
ಉಡುಪಿ: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನ್ಯಾಯ ಬದ್ಧವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ನೇತೃತ್ವದಲ್ಲಿ ಉಡುಪಿಯ ಸರ್ವಿಸ್ ಬಸ್ ನಿಲ್ದಾಣ ಸಮೀಪದ ಬೋರ್ಡ್ ಹೈಸ್ಕೂಲ್ ಬಳಿ ರವಿವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮೈಸೂರಿನ ಒಡನಾಡಿ ಸಂಸ್ಥೆಯ ಹೈಕೋರ್ಟ್ ವಕೀಲ ಶ್ರೀನಿವಾಸ್, ಸೌಜನ್ಯ ಪ್ರಕರಣದ ತೀರ್ಪನ್ನು ಪರಿಶೀಲಿಸಿದಾಗ ಇಲ್ಲಿ ಪೊಲೀಸರ ಕರ್ತವ್ಯ ಲೋಪ ಎದ್ದು ಕಾಣುತ್ತದೆ. ಆದುದರಿಂದ ಈ ಪ್ರಕರಣವನ್ನು ಮರು ತನಿಖೆ ನಡೆಸಬೇಕು ಮತ್ತು ಅದಕ್ಕಾಗಿ ದಕ್ಷ ತನಿಖಾಧಿಕಾರಿಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಸೌಜನ್ಯ ಈಗ ಕುಸುಮವತಿ ಅವರ ಮಗಳಾಗಿ ಉಳಿದಿಲ್ಲ. ಆಕೆ ಇಡೀ ರಾಜ್ಯದ ಮಗಳು ಆಗಿದ್ದಾಳೆ. ಆದುದರಿಂದ ಆಕೆಯ ಸಾವಿಗೆ ನ್ಯಾಯ ಸಿಗುವವರೆಗೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕು. ರಾಜ್ಯ ಸರಕಾರ ಮರು ತನಿಖೆ ನಡೆಸಿ ನಿಜವಾದ ಆರೋಪಿಗಳನ್ನು ಬಂಧಿಸುವರೆಗೆ ಹೋರಾಟ ಮುಂದುವರೆಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜನಪರ ಹೋರಾಟಗಾರ ಜಯನ್ ಮಲ್ಪೆ, ಬೆಳ್ತಂಗಡಿಯ ಪ್ರಗತಿಪರ ಹೋರಾಟಗಾರ ಶೇಖರ್ ಲಾಯಿಲ, ಹಿರಿಯ ಚಿಂತಕ ಪ್ರೊ.ಫಣಿರಾಜ್, ಹೋರಾಟಗಾರ ಶ್ರೀರಾಮ ದಿವಾಣ, ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಮತ್ತು ತಾಲೂಕು ಸಂಚಾಲಕ ದಯಾನಂದ ಕಪ್ಪೆಟ್ಟು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಗಣೇಶ್ ನೆರ್ಗಿ, ರಮೇಶ್ ಪಾಲ್, ಕಿಟ್ಟ ಶ್ರೀಯಾನ್, ಬಿ.ಎನ್.ಸಂತೋಷ್, ಭಗವನ್ ದಾಸ್, ದಿನೇಶ್ ಜವನರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























