ಪಂಜಾಬ್‌ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಧರ್ಮಾಂತರ ನಿಷೇಧ ಕಾಯ್ದೆ ಜಾರಿ: ಅಮಿತ್ ಶಾ ಘೋಷಣೆ

amith shah
17/03/2026

ಮೋಗಾ, ಪಂಜಾಬ್: ಪಂಜಾಬ್ ರಾಜ್ಯದಲ್ಲಿ ಮುಂಬರುವ 2027ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ರಣಕಹಳೆ ಊದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದಲ್ಲಿ ನಡೆಯುತ್ತಿರುವ ಧರ್ಮಾಂತರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಶನಿವಾರ ಮೋಗಾದಲ್ಲಿ ನಡೆದ ‘ಬದಲಾವ’ (ಬದಲಾವಣೆ) ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಂಜಾಬ್‌ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜಾರಿಗೆ ತರುವ ಮೊದಲ ಕಾನೂನೇ ‘ಧರ್ಮಾಂತರ ನಿಷೇಧ ಕಾಯ್ದೆ’ ಎಂದು ಘೋಷಿಸಿದರು.

ಇಡೀ ಪಂಜಾಬ್ ರಾಜ್ಯವು ಧರ್ಮಾಂತರದ ಸಮಸ್ಯೆಯಿಂದ ಬಳಲುತ್ತಿದೆ. ಆಮಿಷ ಅಥವಾ ಭಯದ ಮೂಲಕ ನಡೆಯುವ ಇಂತಹ ಕೃತ್ಯಗಳನ್ನು ತಡೆಯಲು ಪಂಜಾಬ್ ಸರ್ಕಾರ ವಿಫಲವಾಗಿದೆ ಎಂದು ಅಮಿತ್ ಶಾ ಆರೋಪಿಸಿದರು.

ಒಂಬತ್ತನೇ ಸಿಖ್ ಗುರುಗಳಾದ ಗುರು ತೇಗ್ ಬಹದ್ದೂರ್ ಅವರು ಧರ್ಮಾಂತರವನ್ನು ವಿರೋಧಿಸಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದರು. ಅವರ ತ್ಯಾಗದಿಂದಲೇ ಇಂದು ಭಾರತದಲ್ಲಿ ಹಿಂದೂ ಧರ್ಮ ಉಳಿದಿದೆ. ಆದರೆ ಇಂದು ಅಧಿಕಾರದ ಆಸೆಗಾಗಿ ಕೆಲವು ಪಕ್ಷಗಳು ಧರ್ಮಾಂತರದಂತಹ ವಿಷಯಗಳಲ್ಲಿ ಮೌನ ವಹಿಸಿವೆ ಎಂದು ಅವರು ಟೀಕಿಸಿದರು.

2027ರ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಪಕ್ಷದೊಂದಿಗೆ (ಶಿರೋಮಣಿ ಅಕಾಲಿದಳ ಸೇರಿದಂತೆ) ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಮತ್ತು ಪಂಜಾಬ್‌ನಲ್ಲಿ ತನ್ನದೇ ಸರ್ಕಾರವನ್ನು ರಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ವರ್ಷಗಳಲ್ಲಿ ಪಂಜಾಬ್ ಅನ್ನು ಮಾದಕ ದ್ರವ್ಯ (Drugs) ಮುಕ್ತವನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿ ಭಗವಂತ್ ಮಾನ್ ಅವರು ದೆಹಲಿ ನಾಯಕರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಭಾಷಣದ ಮೂಲಕ ಅಮಿತ್ ಶಾ ಅವರು ಪಂಜಾಬ್‌ನಲ್ಲಿ ಹಿಂದೂ-ಸಿಖ್ ಮತಗಳ ಧ್ರುವೀಕರಣಕ್ಕೆ ಮುಂದಾಗಿದ್ದು, ರಾಜ್ಯದ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version