9:02 AM Friday 12 - September 2025

ಮಾದಪ್ಪನ ಬೆಟ್ಟದ ತಪ್ಪಲಿನಲ್ಲಿ ಮತ್ತೇ ಶ್ರೀಗಂಧ ಕಳ್ಳರ ಎಂಟ್ರಿ: ಅರಣ್ಯ ಇಲಾಖೆ ಜಾಣ ಕುರುಡು!?

chamarajanagara
11/09/2023

ಚಾಮರಾಜನಗರ: ಪ್ರಸಿದ್ಧ ಯಾತ್ರಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಮತ್ತೇ ಶ್ರೀಗಂಧದ ಕಳ್ಳರ ಎಂಟ್ರಿಯಾಗಿದ್ದು ಶ್ರೀಗಂಧದ ಮರಗಳನ್ನು ಕತ್ತರಿಸಲು ಮುಂದಾದ ಘಟನೆ ನಡೆದಿದೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿರುವ ಶ್ರೀಗಂಧದ ಮರಗಳನ್ನು ಕತ್ತರಿಸಿ ಹಾಗೆ ಬಿಟ್ಟಿದ್ದಾರೆ. ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ವರೆಗೆ ರಸ್ತೆಯ ಎಡ ಹಾಗೂ ಬಲ ಬದಿಗಳಲ್ಲಿ ನೂರಾರು ಶ್ರೀಗಂಧದ ಮರಗಳು ಬೆಳೆದಿದ್ದು ಮುಖ್ಯರಸ್ತೆಯಲ್ಲಿರುವ ಐದಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಅರ್ಧಕಡಿದು ಹಾಗೆ ಬಿಡುವ ಮೂಲಕ ಮತ್ತೇ ಕಳ್ಳರು ಕೈ ಚಳಕ ತೋರಲು ಮುಂದಾಗಿದ್ದಾರೆ.

ಹಿಂದೆಯೂ ನಡೆದಿತ್ತು ಕಳ್ಳತನ:

ಕಳೆದ ಎರಡೂವರೆ ವರ್ಷಗಳ ಹಿಂದೆ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ರಸ್ತೆ ಬದಿಯಲ್ಲಿದ್ದ ಸುಮಾರು 20 ಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಬುಡ ಸಮೇತ ಕಡಿದಿದ್ದರು‌. ಆಗಲೂ ಅರಣ್ಯ ಇಲಾಖೆ ವಿಶೇಷ ತಂಡ ರಚನೆ ಮಾಡಿ ಕಳ್ಳರನ್ನು ಪತ್ತೆ ಮಾಡುವುದಾಗಿ ಹೇಳಿತ್ತು‌. ಆದರೆ ಕೊನೆಗೂ ಕಳ್ಳರ ಪತ್ತೆಯಾಗಿರಲಿಲ್ಲ. ಇದೀಗ ಮತ್ತೆ ಕಳ್ಳರು ಶ್ರೀಗಂಧದ ಮರಗಳನ್ನು ಕಡಿಯಲು ಪ್ರಾರಂಭಿಸಿದ್ದಾರೆ

ಇನ್ನು, ಮಲೆ ಮಹದೇಶ್ವರ ವನ್ಯಜೀವಿಧಾಮದ ಸಿಬ್ಬಂದಿ ಸದಾ ವಾಹನದಲ್ಲಿ ಗಸ್ತು ತಿರುಗಿದರೂ ಮರ ಕಡಿದಿರುವುದು ಕಾಣದಿರುವುದು ವಿಪರ್ಯಾಸವಾಗಿದೆ.

ಡಿಸಿಎಫ್ ಪ್ರತಿಕ್ರಿಯೆ: ಮರಗಳ ಹನನ ಸಂಬಂಧ ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ರಸ್ತೆ ಬದಿಯಲ್ಲಿರುವ ಶ್ರೀಗಂಧದ ಮರಗಳನ್ನು ಕಡಿದು ಹಾಗೆ ಬಿಟ್ಟಿರುವುದು ಗಮನಕ್ಕೆ ಬಂದಿಲ್ಲ, ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version