ವಿದ್ಯಾರ್ಥಿ ಮೇಲೆ ಹಣ ಕದ್ದ ಆರೋಪ: ಬಾಲಕನನ್ನು ನೆಲಕ್ಕೆಸೆದು ಅಮಾನುಷವಾಗಿ ಹಲ್ಲೆ; ವೀಡಿಯೋ ವೈರಲ್
ಸಂಸ್ಕೃತ ವಸತಿ ಗುರುಕುಲದಲ್ಲಿ ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸೀತಾಪುರದ ಸಿಧೌಲಿ ಪ್ರದೇಶದ ಝಜನ್ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದ್ದು ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋದಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಅಮಾನುಷವಾಗಿ ಥಳಿಸುತ್ತಿರುವುದನ್ನು ಕಂಡು ಇತರ ಮಕ್ಕಳೂ ಭಯಭೀತರಾಗಿರುವುದು ಕಂಡುಬಂದಿದೆ. ಇಲ್ಲಿ ಪಾಠ ಮಾಡುವ ಶಿಕ್ಷಕ ಮೃಗೀಯವಾಗಿ ವಿದ್ಯಾರ್ಥಿ ಮೇಲೆ ದಾಳಿ ನಡೆಸಿದ್ದು, ಮೊದಲಿಗೆ ಕಪಾಳ ಮೋಕ್ಷ ಮಾಡಿ, ಬಳಿಕ ವಿದ್ಯಾರ್ಥಿಯನ್ನು ಎತ್ತಿ ನೆಲಕ್ಕೆ ಅಪ್ಪಳಿಸುತ್ತಿರುವುದು ಕಂಡು ಬಂದಿದೆ.
ವಿಡಿಯೋ ವೈರಲ್ ಆದ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆಚಾರ್ಯ ಮತ್ತೊಂದು ವಿಡಿಯೋ ಮಾಡಿ ಅದರ ಬಗ್ಗೆ ಸ್ಪಷ್ಟನೆ ನೀಡಿದ್ದಾನೆ.
‘ವಿದ್ಯಾರ್ಥಿ ಹಣ ಕದ್ದಿದ್ದಕ್ಕೆ ಹೊಡೆದಿದ್ದೇನೆ. ಇದೇ ವೇಳೆ ವಿದ್ಯಾರ್ಥಿಯ ಕುಟುಂಬಸ್ಥರು ಎದುರಲ್ಲೇ ಇದ್ದರು. ಅವರ ಸಮ್ಮುಖದಲ್ಲೇ ಥಳಿಸಿದ್ದೇನೆ’ ಎಂದು ಶಿಕ್ಷಕ ಹೇಳಿಕೊಂಡಿದ್ದಾನೆ.

























