ಮೋದಿಯವರನ್ನು ಸೂರ್ಯಲೋಕಕ್ಕೆ ಕಳುಹಿಸಿ: ಮಾಜಿ ಸಚಿವ ಲಾಲೂ ಪ್ರಸಾದ್ ಯಾದವ್ ವ್ಯಂಗ್ಯ

02/09/2023

ಕೇಂದ್ರದ ಮಾಜಿ ಸಚಿವ ಲಾಲೂ ಪ್ರಸಾದ್ ಯಾದವ್ ಅವರು, ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಂಬೈನಲ್ಲಿ ನಡೆದ ವಿಪಕ್ಷ ಮೈತ್ರಿಕೂಟದ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಜೀಯವರನ್ನು ಸೂರ್ಯಲೋಕಕ್ಕೆ ಕಳುಹಿಸಿ ಎಂದು ವಿಜ್ಞಾನಿಗಳಲ್ಲಿ ಮನವಿ ಮಾಡಿದ್ದಾರೆ.

‘ಪ್ರತಿಪಕ್ಷಗಳು ಒಗ್ಗಟ್ಟಾಗದೇ ಇರುವುದರ ಲಾಭವನ್ನು ಮೋದಿ ಪಡೆದುಕೊಂಡಿದ್ದಾರೆ. ಬಿಜೆಪಿಯನ್ನು ತೊಲಗಿಸಿ, ದೇಶ ಉಳಿಸಿ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಬಿಜೆಪಿಯಿಂದಾಗಿ ದೇಶದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿಲ್ಲ’ ಎಂದು ಕಿಡಿಕಾರಿದರು.

ಇದೇ ವೇಳೆ ಅವರು ಹಣದುಬ್ಬರದ ವಿರುದ್ಧವೂ ಲೇವಡಿ ಮಾಡಿ, “ಬಡತನ ಮತ್ತು ಹಣದುಬ್ಬರ ಹೆಚ್ಚುತ್ತಿದೆ. ಬೆಂಡೆಕಾಯಿ ಕೆಜಿಗೆ 60 ರೂಪಾಯಿ ಆಯಿತು. ರುಚಿ ಇಲ್ಲದ ಟೊಮೆಟೊ ಬೆಲೆಯೂ ಗಗನಕ್ಕೇರಿದೆ” ಎಂದು ಹೇಳಿದರು.

ಮೋದಿ ಅವರು 15 ಲಕ್ಷ ಕೊಡುತ್ತಿದ್ದಾರೆಂದು ನಂಬಿ ನಾನು ನನ್ನ ಪತ್ನಿ ಹಾಗೂ ಮಕ್ಕಳು ಸೇರಿ ಒಟ್ಟು 11 ಮಂದಿ ಅಕೌಂಟ್‌ ಮಾಡಿಸಿಕೊಂಡಿದ್ದೆವು ಎಂದು ಲಾಲೂ ಯಾದವ್‌ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಮೋದಿ ಹೆಸರು ಜಗತ್ತಿನಾದ್ಯಂತ ಜನಪ್ರಿಯಗೊಳ್ಳಲು ಅವರನ್ನು ಸೂರ್ಯಲೋಕಕ್ಕೆ ಕಳುಹಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.

‘ಚಂದ್ರಯಾನ-3 ಯಶಸ್ಸಿನ ನಂತರ ನಮ್ಮ ವಿಜ್ಞಾನಿಗಳು ಪ್ರಸಿದ್ಧರಾಗುತ್ತಿದ್ದಾರೆ. ದೇಶದ ವಿಜ್ಞಾನಿಗಳು ಎಷ್ಟೋ ಸಾಧನೆ ಮಾಡಿದ್ದಾರೆ. ಮೋದೀಜಿ ಅವರನ್ನ ಸೂರ್ಯಲೋಕಕ್ಕೆ ಕಳುಹಿಸಿ ಎಂದು ನಮ್ಮ ವಿಜ್ಞಾನಿಗಳಲ್ಲಿ ಮನವಿ ಮಾಡುತ್ತಿದ್ದೇವೆ. ಇದರಿಂದ ಮೋದಿಯವರ ಹೆಸರು ಜಗತ್ತಿನಾದ್ಯಂತ ಜನಪ್ರಿಯವಾಗಲಿದೆ ಎಂದು ತಮ್ಮ ಹಾಸ್ಯದ ದಾಟಿಯಲ್ಲಿ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version