ವಯನಾಡ್ ಭೂಕುಸಿತ: 24 ಕ್ಕಿಂತಲೂ ಹೆಚ್ಚು ಮಂದಿ ಸಾವು, 400ಕ್ಕೂ ಹೆಚ್ಚು ಮಂದಿ ಅವಶೇಷದಡಿ ಸಿಲುಕಿರುವ ಶಂಕೆ; ಪ್ರಧಾನಿ ಮೋದಿ ಕಳವಳ
ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 24 ಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಝೀ ನ್ಯೂಸ್ ಟಿವಿ ವರದಿ ಮಾಡಿದೆ. ಮೃತಪಟ್ಟವರಲ್ಲಿ ಚೂರಲ್ಮಾಲಾ ಪಟ್ಟಣದಲ್ಲಿ ನಾಲ್ಕು ಜನರು ಮತ್ತು ತೊಂಡರ್ನಾಡ್ ಗ್ರಾಮದ ನೇಪಾಳಿ ಕುಟುಂಬದ ಒಂದು ವರ್ಷದ ಮಗು ಸೇರಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಎನ್ಡಿಆರ್ ಎಫ್ ಮತ್ತು ವಾಯುಪಡೆ ಸೇರಿದಂತೆ ಹಲವಾರು ಏಜೆನ್ಸಿಗಳು ಮೆಪ್ಪಾಡಿ ಬಳಿಯ ಪರ್ವತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ.
ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ವಿವಿಧ ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ ಭಾರಿ ಭೂಕುಸಿತ ಸಂಭವಿಸಿದ್ದು, 400 ಕ್ಕೂ ಹೆಚ್ಚು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಪಿಟಿಐ ಪ್ರಕಾರ, ಯುಡಿಎಫ್ ಶಾಸಕ ಟಿ.ಸಿದ್ದೀಕ್ ಅವರ ವೀಡಿಯೊ ಹೇಳಿಕೆಯಲ್ಲಿ ಮುಂಡಕ್ಕೈ ಪ್ರದೇಶದಿಂದ ವ್ಯಕ್ತಿಗಳನ್ನು ಏರ್ ಲಿಫ್ಟ್ ಮಾಡಲು ಜಿಲ್ಲಾ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲಾ ಮತ್ತು ನೂಲ್ಪುಝ ಗ್ರಾಮಗಳು ಭೂಕುಸಿತದಿಂದ ಹಾನಿಗೊಳಗಾದ ಮತ್ತು ಸಂಪರ್ಕ ಕಡಿದುಕೊಂಡ ಪ್ರದೇಶಗಳಲ್ಲಿ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ವಯನಾಡಿನ ಕೆಲವು ಭಾಗಗಳಲ್ಲಿ ಭೂಕುಸಿತದಿಂದ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗಿದ್ದೇನೆ ಮತ್ತು ಗಾಯಗೊಂಡವರೊಂದಿಗೆ ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಸಹಾಯ ಮಾಡಲು ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕೇರಳ ಮುಖ್ಯಮಂತ್ರಿ ಶ್ರೀ @ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಅಲ್ಲಿನ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದೇನೆ” ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

























