1:33 AM Thursday 16 - October 2025

ಬೀದರ್ ನಲ್ಲಿ ಎಟಿಎಂ ಹಣ ದೋಚಿದವರು ಹೈದರಾಬಾದ್ ನಲ್ಲಿ ಪತ್ತೆ: ಪೊಲೀಸರ ಮೇಲೆಯೇ ಫೈರಿಂಗ್, ಒಬ್ಬನ ಸೆರೆ

bidar
17/01/2025

ಬೀದರ್:  ಎಟಿಎಂಗೆ ಹಣ ತುಂಬಿಸುವ ವಾಹನದ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದ ಮೂವರು ದರೋಡೆಕೋರರ ಪೈಕಿ ಒಬ್ಬನನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂವರು ದರೋಡೆಕೋರರು ಹೈದರಾಬಾದ್ ನಲ್ಲಿ ಪತ್ತೆಯಾಗಿದ್ದು, ಅಲ್ಲಿಗೆ ಪೊಲೀಸರು ತೆರಳುವಷ್ಟರಲ್ಲಿ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿ ದರೋಡೆಕೋರರು ಎಸ್ಕೇಪ್ ಆಗಿದ್ದಾರೆ. ಹೈದರಾಬಾದ್ ಪೊಲೀಸರ ಸಹಾಯದಿಂದ ದರೋಡೆಕೋರರನ್ನು ಚೇಸ್ ಮಾಡಿದ ಪೊಲೀಸರು ಮೂವರಲ್ಲಿ ಒಬ್ಬನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೈದರಾಬಾದ್ ನ ಖಾಸಗಿ ಟ್ರಾವೆಲ್ ಏಜೆನ್ಸಿ ಕಚೇರಿಗೆ ಹೋಗಿದ್ದ ದರೋಡೆಕೋರರು, ರಾಯ್ ಪುರಕ್ಕೆ ಟಿಕೆಟ್ ಬುಕ್ ಮಾಡಲು ಮುಂದಾಗಿದ್ದರು.  ಸಂಜೆ 7:30ಕ್ಕೆ ಬಸ್ ಹೊರಡಬೇಕಿತ್ತು. ಬಸ್ ಹತ್ತುವಾಗ ಎಲ್ಲಾ ಪ್ರಯಾಣಿಕರ ಲಗೇಜ್ ಗಳ ತೂಕಕ್ಕೆ ಹಾಕುವ ನಿಯಮವಿದೆ. ಹಾಗಾಗಿ ಟ್ರಾವೆಲ್ ಏಜೆನ್ಸಿ ಇವರ ಬ್ಯಾಗ್ ತೂಕಕ್ಕೆ ಹಾಕಲು ಹೇಳಿದ್ದರು.  ಆಗ ಹಣದ ಬಂಡಲ್ ಹೊರತೆಗೆದ  ವ್ಯಕ್ತಿ, ಇದನ್ನು ನೀವು ಇಟ್ಟುಕೊಳ್ಳಿ ಎಂದಿದ್ದಾನೆ. ಆಗ ಟ್ರಾವೆಲ್ ಸಿಬ್ಬಂದಿ ಅನುಮಾನಗೊಂಡು ನೀವು ಯಾರು ಎಂದು ವಿಚಾರಿಸಿದಾಗ ಪಿಸ್ತೂಲ್ ತೆಗೆದ ವ್ಯಕ್ತಿ ಬ್ಯಾಗ್ ತೂಕಕ್ಕೆ ಹಾಕದೇ ಬಸ್ಸಿಗೆ ಬಿಡುವಂತೆ ಹೇಳಿದ್ದಾನೆ. ಅಷ್ಟರಲ್ಲಿ ದರೋಡೆಕೋರರ ಜಾಡು ಹಿಡಿದು ಬೀದರ್ ಪೊಲೀಸರು ಕೂಡ ಸ್ಥಳಕ್ಕೆ ತಲುಪಿದ್ದರು.

ಪೊಲೀಸರನ್ನು ಕಂಡು ಗಾಬರಿಗೊಂಡ ದರೋಡೆಕೋರರು,  ಪೊಲೀಸರತ್ತ ಪೈರಿಂಗ್ ಮಾಡಿದ್ದಾರೆ. ಪಿಸ್ತೂಲ್ ನ ಗುಂಡು ಟ್ರಾವೆಲ್ ಏಜೆನ್ಸಿಯ ಕಚೇರಿ ಮ್ಯಾನೇಜರ್ ಗೆ ತಗುಲಿದೆ. ಗುಂಡಿನ ಶಬ್ದಕ್ಕೆ ಬೆಚ್ಚಿ ಬಿದ್ದ ಜನರು ಚದುರಿ ಓಡುತ್ತಿದ್ದ ಸಂದರ್ಭದಲ್ಲಿ ಜನರ ಗುಂಪಿನಲ್ಲೇ ದರೋಡೆಕೋರರು ಕೂಡ ಎಸ್ಕೇಪ್ ಆಗಿದ್ದಾರೆ. ಈ ಪೈಕಿ ಒಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇನ್ನಿಬ್ಬರ ಬಂಧನಕ್ಕೆ ಶೋಧ ನಡೆಯುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ

Exit mobile version