11:34 PM Wednesday 27 - August 2025

ಮುರಾರ್ಜಿ ಶಾಲೆಗೆ ಭೇಟಿ ಮೆಚ್ಚುಗೆ: ನೋಂದಣಿ ಇಲಾಖೆ ವಿರುದ್ಧ ಆಕ್ರೋಶ: ಹಾಸ್ಟೆಲ್ ಅವ್ಯವಸ್ಥೆಗೆ ದಂಗಾದ ಲೋಕಾಯುಕ್ತ

lokayuktha
21/07/2024

ಔರಾದ್ : ಭಯದಿಂದ ದಿನ ಕಳೆಯುತ್ತಿದ್ದೇವೆ. ನಮಗೆ ರಕ್ಷಣೆ ನೀಡಿ ಎಂದು ತಾಲೂಕಿನ ಸಂತಪೂರ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಶನಿವಾರ ಲೋಕಾಯುಕ್ತ ಪೊಲೀಸರಿಗೆ ಮನವಿ ಮಾಡಿದರು. ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ಬಗ್ಗೆ ಕೇಳಿ ಬಂದ ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ನೀಲಪ್ಪ ಓಲೇಕಾರ್ ದಿಡೀರ್ ಭೇಟಿ ನೀಡಿದಾಗ, ವಿದ್ಯಾರ್ಥಿಗಳ ಸಮಸ್ಯೆ ಹಾಗೂ ಅಲ್ಲಿನ ಅವ್ಯವಸ್ಥೆ ಕಂಡು ದಂಗಾದರು.

ವಸತಿ ನಿಲಯದ ಸುತ್ತಲು ಗಬ್ಬುನಾರುತಿದೆ. ಗಿಡಗಂಟಿಗಳು ಬೆಳೆದಿವೆ. ಹಾವು, ಚೇಳುಗಳಂತಹ ವಿಷ ಜಂತುಗಳ ಕಾಟ ಎದುರಾಗಿದೆ. ಹಾಸ್ಟಲ್ ಅಕ್ಕಪಕ್ಕ ಶೌಚಾಲಯದ ನೀರು ನಿಂತು ಸೊಳ್ಳೆಗಳ ಕಾಟವೂ ವಿಪರೀತವಾಗಿದೆ. ಇನ್ನೂ 3 ತಿಂಗಳಿಂದ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ ಮಾಡಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಗೋಳು ತೋಡಿಕೊಂಡರು. ಇದಕ್ಕೆ ಆಕ್ರೋಶಗೊಂಡ ಲೋಕಾಯುಕ್ತ ಡಿವೈಎಸ್ಪಿ ನೀಲಪ್ಪ ಓಲೇಕಾರ್ ಅವರು ತಾಲೂಕು ಅಧಿಕಾರಿ, ಹಾಗೂ ವಾರ್ಡನ್ ಮೇಲೆ ದೂರು ದಾಖಲಿಸಿ ಕ್ರಮಕ್ಕೆ ಇಲಾಖೆಗೆ ಶಿಫಾರಸ್ಸು ಮಾಡುವಂತೆ ಲೋಕಾಯಕ್ತ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಹಾಜರಾತಿ ಪರಿಶೀಲಿಸಿದ ಅವರು ವಾರ್ಡನ್ ಕಳೆದ 3 ತಿಂಗಳಿಂದ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದಿರುವದು ಕಂಡು ಬಂತು. ಹಾಸ್ಟಲ್‌ನಲ್ಲಿ ವಾರ್ಡನ್ ಸೇರಿದಂತೆ ಕೆಲ ಸಿಬ್ಬಂದಿಗಳು ಗೈರಾಗಿದ್ದರು. ಅಡುಗೆ ಸಿಬ್ಬಂದಿಯ ಬದಲಿಗೆ ಅವರ ಹೆಂಡತಿ ಸೇವೆಗೆ ಹಾಜರಾಗಿರುವದನ್ನು ಗಮನಿಸಿದ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

lokayuktha

ವಸತಿ ಸುತ್ತಲು ನೀರು ನಿಂತಿದ್ದು, ಸಾಂಕ್ರಾಮಿಕ ರೋಗದ ಭೀತಿಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಆದರೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿಲ್ಲ ಎಂದು ಇಲಾಖೆಯ ಅಧಿಕಾರಿ ಅನಿಲಕುಮಾರ ಮೇಲದೊಡ್ಡಿ ವಿರುದ್ಧ ದೂರಿದರು. ಇದಕ್ಕೂ ಮುಂಚೆ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಅಲ್ಲಿಯ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ, ಸಿಪಿಐ ರಘುವೀರಸಿಂಗ್ ಠಾಕೂರ್, ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ ಕೊಳ್ಳಾ, ಪೊಲೀಸ್ ಇನ್ಸ್ಪೆಕ್ಟರ್ ವಾಹಿದ್ ಹುಸೇನ್ ಕೊತವಾಲ್, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಸಿಬ್ಬಂದಿ ಶುಕ್ಲೋಧನ ಸೇರಿದಂತೆ ಅನೇಕರಿದ್ದರು.

ಮುರಾರ್ಜಿ ಶಾಲೆಗೆ ಭೇಟಿ ಮೆಚ್ಚುಗೆ:

ತಾಲೂಕಿನ ಸಂತಪೂರ ಮುರಾರ್ಜಿ ಶಾಲೆಗೆ ಭೇಟಿ ನೀಡಿದ ಲೋಕಾಯುಕ್ತ ಡಿವೈಎಸ್ಪಿ ನೀಲಪ್ಪ ಓಲೇಕಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಅಡುಗೆ ಸಿಬ್ಬಂದಿಗಳು ಸ್ಥಳೀಯರೆಂದು ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿಲ್ಲವೆಂದು ದೂರು ಬರುತ್ತಿವೆ. ಇದನ್ನು ವಿರೋಧಿಸಿದರೆ ಶಾಲೆಯ ಪ್ರಾಂಶುಪಾಲರ ವಿರುದ್ಧವೇ ಹೋಗುವದು ಸರಿಯಲ್ಲ ಎಂದು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು. ಡೈನಿಂಗ್ ಹಾಲ್‌ನಲ್ಲಿ ವಿದ್ಯಾರ್ಥಿಗಳಿಗೆ ಸ್ಥಳ ಕೊರತೆಯಾಗುತ್ತಿದ್ದು, ಇದನ್ನು ಮೇಲಾಧಿಕಾರಿಗಳಿಗೆ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು. ಮಕ್ಕಳಿಗೆ ವಸತಿ ಶಾಲೆಯ ಬಗ್ಗೆ ಮಾಹಿತಿ ಪಡೆದರು. ಪ್ರಾಂಶುಪಾಲ ಭಗವಂತ ಕಾಂಬಳೆ ಸೇರಿದಂತೆ ಸಿಬ್ಬಂದಿಗಳಿದ್ದರು.

ನೋಂದಣೆ ಇಲಾಖೆ ವಿರುದ್ಧ ಆಕ್ರೋಶ:

ಕಚೇರಿಯಲ್ಲಿ ಯಾವುದಕ್ಕೆ ಎಷ್ಟು ಹಣವಿದೆ ಎಂದು ನಿಯಮಾನುಸಾರ ನಾಮಫಲಕ ಹಾಕುವಂತೆ ಲೋಕಾಯುಕ್ತ ಡಿವೈಎಸ್ಪಿ ನೀಲಪ್ಪ ಓಲೇಕಾರ್ ಉಪನೋಂದಣೆ ಇಲಾಖೆಯ ಅಧಿಕಾರಿ ಪ್ರೇಮಿಬಾಯಿ ಅವರಿಗೆ ಸೂಚಿಸಿದರು. ತಮ್ಮ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿವೆ. ಇಲಾಖೆಯಲ್ಲಿ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ ಎಂದು ಹಾಜರಾತಿ ಪುಸ್ತಕ ಕೇಳಿದರು. ಕಚೇರಿಯಲ್ಲಿ ಮೂವರು ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಅವರ ಹಾಜರಾತಿ ವಿಚಾರಿಸಿದಾಗ ಅದು ಅವರ ಬಳಿಯೇ ಇದೆ ಎಂದು ಉತ್ತರಿಸುತ್ತಿದಂತೆ ಆಕ್ರೋಶಗೊಂಡ ಅಧಿಕಾರಿಗಳು ತರಾಟೆ ತೆಗೆದುಕೊಂಡರು. ಅವರ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ತಮ್ಮ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಹಾಜರಾತಿ ತಾವು ನೋಡುವದು ಜವಾಬ್ದಾರಿಯಿದೆ ಎಂದು ಎಚ್ಚರಿಕೆ ನೀಡಿದರು. ಕಚೇರಿಗೆ ಆಗಮಿಸಿದ ಜನರಿಂದ ಮಾಹಿತಿ ಪಡೆದರು.

ವರದಿ:  ರವಿಕುಮಾರ ಶಿಂದೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version