ರಾಮ… ರಾಮಾ…! | ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣ: ಭಕ್ತರ ಹಣ ಕಂಡವರ ಹೊಟ್ಟೆಗೆ ಹಿಟ್ಟಾಯ್ತು!
ಅಯೋಧ್ಯೆ: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ಕಾಣಿಕೆ ಹಣದ ದುರುಪಯೋಗ ಮತ್ತು ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ನಡೆಸಿದ ತನಿಖೆಯಲ್ಲಿ ಆಘಾತಕಾರಿ ಸತ್ಯಗಳು ಹೊರಬಂದಿವೆ. ದೇವಸ್ಥಾನದ ದೇಣಿಗೆ ನಿರ್ವಹಣೆಯಲ್ಲಿ ಭಾರಿ ಹಣಕಾಸು ಅಕ್ರಮಗಳು ಮತ್ತು ಗಂಭೀರ ಭದ್ರತಾ ವೈಫಲ್ಯಗಳು ಇರುವುದನ್ನು ಎಸ್ ಐಟಿ ಪತ್ತೆಹಚ್ಚಿದೆ.
ಟ್ರಸ್ಟ್ ನ ಕೋರಿಕೆಯ ಮೇರೆಗೆ ರಚಿಸಲಾಗಿದ್ದ ಮೂವರು ಸದಸ್ಯರ ಈ ಎಸ್ ಐಟಿ ತಂಡವು ಸುಮಾರು 100 ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿ ವರದಿ ಸಿದ್ಧಪಡಿಸಿದ್ದು, ತಪ್ಪು ಮಾಡಿದವರ ವಿರುದ್ಧ ಎಫ್ ಐಆರ್ (FIR) ದಾಖಲಿಸಲು ಸಜ್ಜಾಗಿದೆ.
ದೇವಸ್ಥಾನದ ಕಾಣಿಕೆ ಹಣವನ್ನು ಎಣಿಕೆ ಮಾಡುವ ಸಮಯದಲ್ಲಿ ಅಲ್ಲಿನ ನೌಕರರು ಸಿಸಿಟಿವಿ ಕ್ಯಾಮೆರಾಗಳಿಗೆ ಅಡ್ಡವಾಗಿ ನಿಂತು ದೃಶ್ಯಾವಳಿಗಳು ರೆಕಾರ್ಡ್ ಆಗದಂತೆ ತಡೆದಿದ್ದಾರೆ. ನಗದು ಎಣಿಕೆ ಕೋಣೆಯ ಸಿಸಿಟಿವಿ ರೆಕಾರ್ಡಿಂಗ್ ಗಳನ್ನು ಡಿಲೀಟ್ ಮಾಡಲಾಗಿರುವ ಅಥವಾ ಬದಲಾಯಿಸಲಾಗಿರುವ ಬಲವಾದ ಲಕ್ಷಣಗಳು ಕಂಡುಬಂದಿವೆ. ಸದ್ಯ ಕೇವಲ 45 ದಿನಗಳ ಹಳೆಯ ದೃಶ್ಯಾವಳಿಗಳು ಮಾತ್ರ ಲಭ್ಯವಿದ್ದು, ಹಳೆಯ ದಾಖಲೆಗಳ ಪರಿಶೀಲನೆ ಕಷ್ಟವಾಗಿದೆ.
ಹಣ ಎಣಿಸುವ ಸಿಬ್ಬಂದಿ ಬರುವಾಗ ಮತ್ತು ಹೋಗುವಾಗ ಅವರ ದೇಹ ತಪಾಸಣೆ (Checking) ನಡೆಸಲು ಯಾವುದೇ ಬಲವಾದ ವ್ಯವಸ್ಥೆ ಇರಲಿಲ್ಲ. ನಿಯಮಿತ ಸಮವಸ್ತ್ರ ಧರಿಸುವ ಬದಲಿಗೆ ಸಿಬ್ಬಂದಿ ತಮ್ಮ ಸಾಮಾನ್ಯ ಬಟ್ಟೆಯಲ್ಲೇ ಬಂದು ಹಣ ಎಣಿಸುತ್ತಿದ್ದರು. ಇದು ಹಣವನ್ನು ಸುಲಭವಾಗಿ ಹೊರಗೆ ಸಾಗಿಸಲು ದಾರಿ ಮಾಡಿಕೊಟ್ಟಿದೆ.
ದೇವಸ್ಥಾನದ 35 ದೇಣಿಗೆ ಪೆಟ್ಟಿಗೆಗಳಿಂದ ಹಣವನ್ನು ತಂದು ಎಣಿಸುವ ಜವಾಬ್ದಾರಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಿಬ್ಬಂದಿಗೆ ನೀಡಲಾಗಿತ್ತು. ಆದರೆ, ಬ್ಯಾಂಕ್ ನವರು ವಾರಾಣಸಿಯ ಖಾಸಗಿ ಸಂಸ್ಥೆಯೊಂದರ ಮೂಲಕ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದರು. ಈ ನೇಮಕಾತಿಯು ರಾಮ ಮಂದಿರ ಟ್ರಸ್ಟ್ ಗೆ ಆಪ್ತರಾದವರ ಶಿಫಾರಸಿನ ಮೇರೆಗೆ ನಡೆದಿತ್ತು. ಇಂತಹ ಅಪಾರದರ್ಶಕ ನೇಮಕಗಳಿಂದ ವಂಚನೆ ಸುಲಭವಾಗಿದೆ ಎಂದು ಎಸ್ ಐಟಿ ಹೇಳಿದೆ.
ಕೇವಲ ನಗದು ಮಾತ್ರವಲ್ಲದೆ, ಭಕ್ತರು ದೇವರಿಗೆ ದಾನ ಮಾಡಿದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳು ಮತ್ತು ಅಮೂಲ್ಯ ರತ್ನಗಳನ್ನು ಟ್ರಸ್ಟ್ ಹೇಗೆ ಸಂಗ್ರಹಿಸಿಟ್ಟಿದೆ ಮತ್ತು ದಾಖಲಿಸಿದೆ ಎಂಬುದಕ್ಕೆ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ. ದಾಖಲೆಗಳಲ್ಲಿ ಭಾರಿ ವ್ಯತ್ಯಾಸಗಳಿದ್ದು, ಅಸಲಿ ಆಭರಣಗಳನ್ನು ಕದ್ದು ಅವುಗಳ ಜಾಗಕ್ಕೆ ನಕಲಿ ಆಭರಣಗಳನ್ನು ಇಟ್ಟಿರುವ ಶಂಕೆಯನ್ನು ಎಸ್ಐಟಿ ವ್ಯಕ್ತಪಡಿಸಿದೆ.
2025 ರ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆದ ಮಹಾ ಕುಂಭಮೇಳದ ಸಮಯದಲ್ಲಿ ಹರಿದುಬಂದ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ಎಸ್ಐಟಿ ಪರಿಶೀಲಿಸುತ್ತಿದೆ. ಇದರೊಂದಿಗೆ ಟ್ರಸ್ಟ್ ಖರೀದಿಸಿರುವ ಭೂಮಿ ಮತ್ತು ಕಟ್ಟಡ ಸಾಮಗ್ರಿಗಳ ವ್ಯವಹಾರದಲ್ಲೂ ಅಕ್ರಮ ನಡೆದಿದೆಯೇ ಎಂಬ ತನಿಖೆ ನಡೆಯುತ್ತಿದೆ. ಈಗಾಗಲೇ ಎಣಿಕೆ ಕಾರ್ಯದಲ್ಲಿದ್ದ 40 ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.
ಭವಿಷ್ಯದಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ತಡೆಯಲು ಎಸ್ಐಟಿ ಮುಖ್ಯಮಂತ್ರಿ ಕಚೇರಿಗೆ ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ:
ಖಾಸಗಿ ವ್ಯಕ್ತಿಗಳ ಬದಲಿಗೆ ಕೇವಲ ಅಧಿಕೃತ ಬ್ಯಾಂಕ್ ಸಿಬ್ಬಂದಿಯಿಂದ ಮಾತ್ರ ಹಣ ಎಣಿಸಬೇಕು.
ನೌಕರರ ನೇಮಕಾತಿಯನ್ನು ಸಂಪೂರ್ಣ ಪಾರದರ್ಶಕವಾಗಿ ಮಾಡಬೇಕು.
ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಕಠಿಣಗೊಳಿಸಬೇಕು.
ದೇವಸ್ಥಾನದ ಒಟ್ಟು ಆದಾಯ ಮತ್ತು ಖರ್ಚುಗಳ ಬಗ್ಗೆ ನಿಯಮಿತವಾಗಿ ಸ್ವತಂತ್ರ ಆಡಿಟಿಂಗ್ (ಲೆಕ್ಕಪರಿಶೋಧನೆ) ನಡೆಸಬೇಕು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























