ಬೆಳ್ತಂಗಡಿ: ಲಾಯಿಲ ಗ್ರಾ.ಪಂ. ವಿಶೇಷ ಗ್ರಾಮಸಭೆ: ಅಧಿಕಾರಿಗಳ ಅಸಡ್ಡೆಗೆ ದಲಿತ ಮುಖಂಡರ ಆಕ್ರೋಶ, ಧರಣಿ ಎಚ್ಚರಿಕೆ

23/07/2026

ಬೆಳ್ತಂಗಡಿ: ಸ್ಥಳೀಯ ಮಹಾತ್ಮ ಗಾಂಧಿ ಲಾಯಿಲ ಗ್ರಾಮ ಪಂಚಾಯತ್‌ನ ಭಾರತಮಾತಾ ಸಭಾವನದಲ್ಲಿ ಜುಲೈ 22 ರಂದು ಹಮ್ಮಿಕೊಳ್ಳಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು-ಕೊರತೆಗಳ ವಿಶೇಷ ಗ್ರಾಮಸಭೆಯು ಅಧಿಕಾರಿಗಳ ಗೈರುಹಾಜರಿ ಮತ್ತು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಸಾಕ್ಷಿಯಾಯಿತು.

ಹಿರಿಯರಾದ ಲಿಂಗಪ್ಪ ನಾಯ್ಕ್ ಬಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಸರಕಾರ ದಲಿತರ ಕಲ್ಯಾಣಕ್ಕಾಗಿ ವಿಶೇಷ ಸಭೆಗಳನ್ನು ಆಯೋಜಿಸುತ್ತಿದ್ದರೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸದೆ ಅಸಡ್ಡೆ ತೋರುತ್ತಿದ್ದಾರೆ ಎಂದು ಗ್ರಾಮಸ್ಥ ಶೇಖರ್ ಲಾಯಿಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖ ಅಧಿಕಾರಿಗಳ ಅನುಪಸ್ಥಿತಿಯು ಸರಕಾರ ಪ್ರೇರಿತ ದೌರ್ಜನ್ಯದಂತಿದೆ ಎಂದು ಅವರು ಆರೋಪಿಸಿದರು.

ಅಪಾಯಕಾರಿ ಮರ ತೆರವು ಹಾಗೂ ಗ್ಯಾಸ್ ಸಂಪರ್ಕ: ಲಾಯಿಲ–ನಿನ್ನಿಕಲ್ಲು ರಸ್ತೆಯ ಅಂಕಾಜೆ ಭಾಗದಲ್ಲಿ ಅಪಾಯಕಾರಿಯಾಗಿರುವ ಮರಗಳನ್ನು ತಕ್ಷಣ ತೆರವುಗೊಳಿಸಬೇಕು. ಹಾಗೆಯೇ ಅರಣ್ಯ ಇಲಾಖೆಯಿಂದ ನೀಡಲಾಗುವ ಅಡುಗೆ ಅನಿಲ (LPG) ವಿತರಣೆಯ ಸಂಖ್ಯೆಯನ್ನು ಹೆಚ್ಚಿಸಿ ಹೆಚ್ಚಿನ ಫಲಾನುಭವಿಗಳಿಗೆ ನೀಡಬೇಕೆಂದು ಒತ್ತಾಯಿಸಲಾಯಿತು.

ಶಿಥಿಲಗೊಂಡ ಸಮುದಾಯ ಭವನಗಳು: ಪುತ್ರಬೈಲು ಮತ್ತು ಪಡ್ಲಾಡಿ ಭಾಗದಲ್ಲಿರುವ ಅಂಬೇಡ್ಕರ್ ಸಮುದಾಯ ಭವನಗಳು ತೀವ್ರ ಶೋಚನೀಯ ಸ್ಥಿತಿಯಲ್ಲಿದ್ದು, ಮೇಲ್ಚಾವಣಿ ಸೋರುತ್ತಿದೆ. ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರು ಭೇಟಿ ನೀಡಿದ್ದರೂ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸುರೇಶ್ ಬೈರ ಬೇಸರ ವ್ಯಕ್ತಪಡಿಸಿದರು.

ಅಡಿಕೆ ಪಾಲಿನಲ್ಲಿ ಮಕ್ಕಳ ಸಾಹಸಯಾತ್ರೆ: ಲಾಯಿಲದ ನಡುಗುಡ್ಡೆ ಎಂಬಲ್ಲಿ ಮಕ್ಕಳು ಮಳೆಗಾಲದಲ್ಲಿ ರಭಸವಾಗಿ ಹರಿಯುವ ತೋಡನ್ನು ಅಪಾಯಕಾರಿ ಅಡಿಕೆ ಪಾಲಿನ (ಕಾಲುಸಂಕ) ಮೂಲಕ ದಾಟಿ ಶಾಲೆಗೆ ಹೋಗಬೇಕಾದ ದುಸ್ಥಿತಿ ಇದೆ. ಸಮಾಜ ಕಲ್ಯಾಣ ಇಲಾಖೆ ಒಂದು ತಿಂಗಳೊಳಗೆ ಈ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ಇಲಾಖೆಯ ಮುಂಭಾಗ ಧರಣಿ ಸತ್ಯಾಗ್ರಹ ನಡೆಸುವುದಾಗಿ ಶೇಖರ್ ಲಾಯಿಲ ಎಚ್ಚರಿಸಿದರು.

ನಿವೇಶನ ಹಂಚಿಕೆ ಮತ್ತು ಭೂ ಒತ್ತುವರಿ: ಗ್ರಾಮದ 116 ನಿವೇಶನ ರಹಿತ ಎಸ್ಸಿ/ಎಸ್ಟಿ ಕುಟುಂಬಗಳಿಗೆ ಜಾಗವಿಲ್ಲದಿದ್ದರೂ, ಖಾಸಗಿ ಶಿಕ್ಷಣ ಸಂಸ್ಥೆಗೆ 5 ಎಕ್ರೆ ಸರಕಾರಿ ಜಮೀನು ನೀಡಲು ಹೊರಟಿರುವುದು ಸರಿಯಲ್ಲ. ಡಿಸೆಂಬರ್ ಒಳಗಾಗಿ 350 ನಿವೇಶನ ರಹಿತರಿಗೆ ಜಾಗ ನೀಡದಿದ್ದಲ್ಲಿ ಸರಕಾರಿ ಜಮೀನು ಅತಿಕ್ರಮಣ ಮಾಡಿ ಮನೆ ನಿರ್ಮಿಸಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ನೇತಾಜಿ ಬಡಾವಣೆ ಅಕ್ರಮ: ನೇತಾಜಿ ಬಡಾವಣೆಯಲ್ಲಿ ನೀಡಲಾದ ನಿವೇಶನಗಳನ್ನು ಬಾಡಿಗೆಗೆ ನೀಡುವುದು, ಮಾರಾಟ ಮಾಡುವುದು ಹಾಗೂ ದುರುಪಯೋಗಪಡಿಸಿಕೊಳ್ಳುವ ದಂಧೆ ನಡೆಯುತ್ತಿದ್ದು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದರು.

ಇತರ ಬೇಡಿಕೆಗಳು:

  • ಮನೆ ನಿರ್ಮಾಣದ ಅನುದಾನವನ್ನು ₹1.75 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಬೇಕು.
  • ಲಾಯಿಲ ಸ್ಮಶಾನದಿಂದ ಲಾಯಿಲಬೈಲು ರಸ್ತೆ ಅಭಿವೃದ್ಧಿಗೆ ಕಾಮಗಾರಿ ತಕ್ಷಣ ಆರಂಭಿಸಬೇಕು.
  • ಬಜಕ್ರೆಸಾಲಿನಲ್ಲಿ ಬೆಟ್ಟದ ಮೇಲಿರುವ ಕುಟುಂಬಗಳಿಗೆ ರಸ್ತೆ ನಿರ್ಮಿಸಲು ಅವಕಾಶ ಕಲ್ಪಿಸಬೇಕು.
  • ‘ಗೃಹಜ್ಯೋತಿ’ ಯೋಜನೆಗಾಗಿ ವಾರ್ಡ್ ಮಟ್ಟದಲ್ಲೇ ಮೆಸ್ಕಾಂ ಸಹಯೋಗದೊಂದಿಗೆ ಪಂಚಾಯತ್ ನೇತೃತ್ವದಲ್ಲಿ ಕ್ಯಾಂಪ್ ಆಯೋಜಿಸಬೇಕು.

ಸಮಾಜ ಕಲ್ಯಾಣ ಇಲಾಖೆಯ ಧೀರಜ್, ಬೆಳ್ತಂಗಡಿ ವಲಯ ಉಪ ಅರಣ್ಯಾಧಿಕಾರಿ ಕಿರಣ್ ಪಾಟೀಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ತಾರನಾಥ್ ನಾಯ್ಕ್, ಗ್ರಾಮಾಡಳಿತಾಧಿಕಾರಿ ರನಿತಾ ಹಾಗೂ ಗ್ರಾ.ಪಂ. ಲೆಕ್ಕ ಸಹಾಯಕಿ ಸುಪ್ರೀತಾ ಶೆಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version