ಬೆಂಗಳೂರು: ಟೋಯಿಂಗ್ ಮರುಜಾರಿ ಸದ್ಯಕ್ಕಿಲ್ಲ: ಕಾರಣ ಏನು?

ಬೆಂಗಳೂರು(Mahanayaka): ರಾಜಧಾನಿ ಬೆಂಗಳೂರಿನಲ್ಲಿ ಟೋಯಿಂಗ್ ಮರುಜಾರಿ ಸದ್ಯಕ್ಕಿಲ್ಲ ಎಂದು ತಿಳಿದು ಬಂದಿದ್ದು, ಟೋಯಿಂಗ್ ಜಾರಿಗೆ ಒಮ್ಮತದ ನಿರ್ಧಾರ ಇನ್ನೂ ಮೂಡಿಲ್ಲ ಹೀಗಾಗಿ ಸದ್ಯಕ್ಕೆ ಟೋಯಿಂಗ್ ಮರು ಜಾರಿ ಇಲ್ಲ ಎಂದು ಹೇಳಲಾಗಿದೆ.
ನಗರಗಳಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆಗಳಿಲ್ಲದ ಕಾರಣ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದಾಗಿ ನಗರದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಸರಿಯಾದ ಪಾರ್ಕಿಂಗ್ ಕಲ್ಪಿಸಿದರೆ, ಎಲ್ಲವೂ ಸರಿ ಹೋಗಬಹುದು. ಆದರೆ ಸರ್ಕಾರ ಪಾರ್ಕಿಂಗ್ ವ್ಯವಸ್ಥೆ ಮಾಡುವ ಬದಲು ಟೋಯಿಂಗ್ ಜಾರಿ ಮಾಡಿ, ವಾಹನ ಸವಾರರ ಮೇಲೆ ದಂಡ ಪ್ರಯೋಗ ಮಾಡುವ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಈ ಹಿಂದೆ ಖಾಸಗಿ ಏಜೆನ್ಸಿಗಳಿಗೆ ಟೋಯಿಂಗ್ ಜವಾಬ್ದಾರಿ ನೀಡಲಾಗಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಈ ಬಾರಿ ಸರ್ಕಾರವೇ ಇಲಾಖೆಯ ಸಿಬ್ಬಂದಿ ಬಳಕೆ ಜೊತೆ ಅಗತ್ಯವಾದರೆ ಪೂರಕವಾಗಿ ಗೃಹ ರಕ್ಷಕರನ್ನ ಬಳಸಿಕೊಂಡು ಟೊಯಿಂಗ್ ಅನುಷ್ಠಾನ ಮಾಡುವ ಬಗ್ಗೆ ಚಿಂತನೆ ನಡೆಸಿತ್ತು. ಆದರೆ ಹೀಗೆ ಕ್ರಮಕೈಗೊಳ್ಳಬೇಕಾದರೆ, 3 ರಿಂದ 4 ಕೋಟಿ ರೂ ಅನುದಾನ ಬೇಕಾಗುತ್ತದೆ. ಹೀಗಾಗಿ, ಟೋಯಿಂಗ್ ಜಾರಿಯ ರೂಪುರೇಷೆಗಳ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಗೃಹ ಇಲಾಖೆಯು ನಿರಂತರ ಸಭೆಗಳನ್ನ ನಡೆಸಿ ಚರ್ಚೆ ನಡೆಸಿದರೂ ಇದುವರೆಗೂ ಒಮ್ಮತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಮುಖ್ಯವಾಗಿ ನಗರದಲ್ಲಿ ಟೋಯಿಂಗ್ ಜಾರಿಗಾಗಿ ವಾಹನಗಳ ಖರೀದಿ, ಉಪಕರಣಗಳ ನಿರ್ವಹಣೆ, ಇಂಧನ ವೆಚ್ಚ, ಹೆಚ್ಚುವರಿಯಾಗಿ ಗೃಹ ರಕ್ಷಕರನ್ನ ನಿಯೋಜಿದರೆ ಅವರ ತರಬೇತಿ ವೆಚ್ಚ ಸೇರಿದಂತೆ ಸುಮಾರು 3ರಿಂದ 4 ಕೋಟಿ ರೂ. ಅನುದಾನದ ಅಗತ್ಯವಿದೆ. ಆದರೆ, ಈ ಹಣ ಒದಗಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎನ್ನಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD