ವೀಲ್ ಮಾಡುವ ವೇಳೆ ನಡೆಯಿತು ಅವಘಡ: ಪವಾಡಸದೃಶವಾಗಿ ಯೂಟ್ಯೂಬರ್ ಪಾರು; ಜೀವ ಕಾಪಾಡಿದ ಹೆಲ್ಮೆಟ್..!

ಅತಿ ವೇಗದ ಬೈಕ್ ಸವಾರಿ ಮತ್ತು ಸ್ಟಂಟ್ ಗಳಿಗೆ ಹೆಸರುವಾಸಿಯಾದ ತಮಿಳುನಾಡಿನ ಜನಪ್ರಿಯ ಯೂಟ್ಯೂಬರ್ ಓರ್ವರು ಚೆನ್ನೈ-ಕೊಯಮತ್ತೂರು ಮಾರ್ಗದಲ್ಲಿ ವೀಲ್ ಮಾಡುವ ವೇಳೆ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ಬೀಳುವ ಮೊದಲು ಹಲವಾರು ಮೀಟರ್ ಗಳಷ್ಟು ಜಾರಿದ್ದಾರೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಅಪಘಾತದ ವೀಡಿಯೊದಲ್ಲಿ ವಾಸನ್ ಅವರು ಬೈಕ್ ಚಕ್ರವನ್ನು ನೆಲದಿಂದ ಮೇಲಕ್ಕೆತ್ತುವಾಗ ನಿಯಂತ್ರಣ ಕಳೆದುಕೊಂಡಿರುವುದನ್ನು ತೋರಿಸುತ್ತದೆ. ವಾಸನ್ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ರಸ್ತೆ ಬದಿಯಲ್ಲಿ ಬಿದ್ದರೆ, ವೇಗವಾಗಿ ಚಲಿಸುತ್ತಿದ್ದ ಬೈಕ್ ಇನ್ನೂ 100 ಮೀಟರ್ ಸ್ಕಿಡ್ ಆಗಿ ರಸ್ತೆಯಿಂದ ಕೆಳಗೆ ಬೀಳುತ್ತದೆ.
ಸ್ಟಂಟ್ ವೀಡಿಯೊಗಳ ಮೂಲಕ ಹೆಸರುವಾಸಿಯಾದ ಯೂಟ್ಯೂಬರ್ ವಾಸನ್ ಅವರಿಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅನೇಕ ಸಂದರ್ಭಗಳಲ್ಲಿ ಪೊಲೀಸರು ದಂಡವನ್ನು ವಿಧಿಸಿದ್ದರು.
ವಾಸನ್ ಚೆನ್ನೈನಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದರು. ಬಾಲುಚೆಟ್ಟಿ ಚಥಿರಂ ಅನ್ನು ದಾಟುವಾಗ, ಸರ್ವಿಸ್ ಲೇನ್ ನಲ್ಲಿ ವೀಲ್ ಮಾಡಲು ಪ್ರಯತ್ನಿಸುವಾಗ ಅಪಘಾತ ಆಗಿದೆ.
ವಾಸನ್ ಅವರು ಹೆಲ್ಮೆಟ್ ಧರಿಸಿದ್ದರಿಂದ ಬದುಕುಳಿದರು. ಅವರನ್ನು ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಸ್ಥಳಾಂತರಿಸಲಾಯಿತು. ಪೊಲೀಸರು ಅಪಘಾತದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದಾರೆ.