ಯಲಹಂಕ ಪ್ರಕರಣ: ಬಿಜೆಪಿಯಿಂದ ದಲಿತರ ಪರವಾಗಿ ಹೋರಾಟ: ಗೋವಿಂದ ಕಾರಜೋಳ

Govinda Karajola
14/09/2023

ಬೆಂಗಳೂರು: ಯಲಹಂಕದಲ್ಲಿ ಸಚಿವರಿಂದ ದಲಿತರ ಮೇಲಿನ ದೌರ್ಜನ್ಯ ಖಂಡನೀಯ. ಬಿಜೆಪಿ ಇಡೀ ರಾಜ್ಯದಲ್ಲಿ ದಲಿತರ ಪರವಾಗಿ ನಿಂತು ಹೋರಾಟ ಮಾಡಲಿದೆ. ಅವರ ಒಂದಿಂಚೂ ಜಮೀನು ಹೋಗಲು ಬಿಡುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೀನದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಸ್ವತಃ ಸಚಿವರೇ ದಲಿತರ ಆಸ್ತಿಯನ್ನು ಕಬಳಿಸುತ್ತಿದ್ದಾರೆ. ದಲಿತರಿಗೆ ಸಿದ್ದರಾಮಯ್ಯನವರ ನೇತೃತ್ವದ ಸರಕಾರವು ಶುದ್ಧವಾದ ನೀರನ್ನೂ ಕೊಡುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ದಲಿತರು ಗೌರವದಿಂದ ಬದುಕುವುದು ಕಷ್ಟವಾಗಿದೆ ಎಂದು ಆರೋಪಿಸಿದರು.

ಯಲಹಂಕದಲ್ಲಿ ನಡೆದ ಪ್ರಕರಣವನ್ನುಬೆಳಕಿಗೆ ತಂದ ಮಾಧ್ಯಮದವರಿಗೆ ಕೃತಜ್ಞತೆಗಳು. ಸಚಿವರಿಗೆ ಜವಾಬ್ದಾರಿ ಇಲ್ಲವಾಗಿದೆ. ಆಸ್ತಿ ಕಬಳಿಕೆ ಪ್ರಕರಣ ದಾಖಲಾದ ಬಳಿಕ ಅವರು ಗೌರವಯುತವಾಗಿ ರಾಜೀನಾಮೆ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕಿತ್ತು. ಇಲ್ಲವೇ ಸಿದ್ದರಾಮಯ್ಯನವರು ಅವರನ್ನು ವಜಾ ಮಾಡಿ ತನಿಖೆ ಮಾಡಲು ಅನುವು ಮಾಡಿಕೊಡಬೇಕಿತ್ತು. ಸ್ವತಃ ಗೃಹಸಚಿವರೇ ಈ ಕುರಿತು ಮಾಹಿತಿ ಪಡೆಯುವುದಾಗಿ ಹೇಳಿದ್ದಾರೆ ಎಂದು ಟೀಕಿಸಿದರು.

ಎಫ್ಐಆರ್ ಆದ ಮೇಲೆ ನೀವು ಏನು ಮಾಹಿತಿ ಪಡೆಯುತ್ತೀರಿ? ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕೇ ಹೊರತು ಹೀಗೆ ಹೇಳುವುದು ಸರಿಯೇ ಎಂದು ಕೇಳಿದರು. ಮನೆಗಳನ್ನು ಕೆಡವಿ, ಕಂಪೌಂಡ್ ಕಿತ್ತು ಹಾಕಿ ಹೊಡೆದು ಬಡಿದು ಓಡಿಸಿದ್ದೀರಲ್ಲ? ಸರಕಾರ ಅವರಿಗೆ ಮನೆ ನಿರ್ಮಿಸಿ ಕೊಡಬೇಕು. ಮನೆ ಜಾಗ ಕಬಳಿಸಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಸಿದೆ. ಬಿಜೆಪಿ ಇಡೀ ರಾಜ್ಯದಲ್ಲಿ ದಲಿತರ ಪರವಾಗಿ ನಿಂತು ಹೋರಾಟ ಮಾಡಲಿದೆ. ಅವರ ಒಂದಿಂಚೂ ಜಮೀನು ಹೋಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, 75 ವರ್ಷದ ದಲಿತ ಮಹಿಳೆ ಮುನಿಯಮ್ಮ ಅವರು ಹಲವು ವರ್ಷಗಳ ಹಿಂದೆ ಈಗಿನ ಸಚಿವ ಡಿ.ಸುಧಾಕರ್ ಅವರನ್ನು ಭೇಟಿ ಮಾಡಿದ್ದರು. ಸರ್ವೇ ನಂಬರ್ನಲ್ಲಿ 108-1ರಲ್ಲಿ ಸೇಲ್ ಡೀಡ್ ಮಾಡಲು ಒಪ್ಪಿಗೆ ಪತ್ರ ಕೋರಿದ್ದರು. ಆಗ ಸುಧಾಕರ್ ಅವರು ಇಂಗ್ಲಿಷ್ನಲ್ಲಿ ಸೇಲ್ ಅಗ್ರಿಮೆಂಟ್ (ವಿಕ್ರಯ ಕರಾರು ಪತ್ರ) ತಯಾರಿಸಿದ್ದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೇಲ್ ಅಗ್ರಿಮೆಂಟ್ ನೋಂದಾಯಿಸಿದ್ದರು ಎಂದು ಆರೋಪಿಸಿದರು.

5.70 ಕೋಟಿಗೆ ಖರೀದಿಸಿದ್ದಾಗಿ ಬರೆದುಕೊಂಡಿದ್ದರು. 4.30 ಕೋಟಿ ನಗದು ಕೊಟ್ಟದ್ದಾಗಿ ಬರೆದುಕೊಂಡಿದ್ದರು. ಉಳಿದ 1.30 ಕೋಟಿಗೆ 6 ಚೆಕ್ ಕೊಟ್ಟಿದ್ದರು. ಒಂದು ಚೆಕ್ ಕೂಡ ಮಾನ್ಯವಾಗಿಲ್ಲ. ಅದು ಮಹಿಳೆ ಬಳಿ ಇದೆ ಎಂದು ವಿವರಿಸಿದರು.

ಬಳಿಕ ಮುನಿಯಮ್ಮ ಅವರು ತಹಶೀಲ್ದಾರ್ ಕಚೇರಿಗೆ ಹೋಗಿದ್ದರು. ಈಚೆಗೆ ಮಹಿಳೆ ಡೀಡ್ ರದ್ದತಿಗೆ ಮುಂದಾದರು. 3 ಎಕರೆಯನ್ನು 9 ಕೋಟಿ ಖರೀದಿಸಿದ್ದಾಗಿ ಇನ್ನೊಂದು ಸೇಲ್ ಡೀಡ್ನಲ್ಲಿ ಬರೆದುಕೊಂಡಿದ್ದರು. ಯಲಹಂಕ ಆರ್ಎಂಸಿ ಯಾರ್ಡಿನ ಮುಖ್ಯರಸ್ತೆಯ ಪ್ರತಿ ಎಕರೆಯ ಮೌಲ್ಯ 13.80 ಕೋಟಿಯ ಜಾಗ ಇದಾಗಿದೆ. ಇವತ್ತು ಇನ್ನೂ ಅದರ ಮೌಲ್ಯ ಜಾಸ್ತಿ ಆಗಿದೆ. 1 ಎಕರೆ 16 ಗುಂಟೆಯನ್ನು ಬೇರೆ ಜಾಗ ಕೊಡುವುದಾಗಿ ಬರೆದುಕೊಂಡಿದ್ದರು ಎಂದರು. ಅದಕ್ಕೆ 5 ಎಕರೆ 16 ಗುಂಟೆ ಜಾಗ ಕೊಡುವುದಾಗಿ ಸಹಿ ಹಾಕಿಸಿಕೊಂಡಿದ್ದರು ಎಂದು ಆರೋಪಿಸಿದರು.

5 ಎಕರೆ 16 ಗುಂಟೆಗೆ ಜಿಪಿಎ ಮಾಡಿಸಿ ಸಹಿ ಹಾಕಿಸಿ ಮಾರಾಟ ಮಾಡಿದ್ದಾರೆ. ಮಾಜಿ ಸಚಿವರಾಗಿದ್ದ ಡಿ.ಸುಧಾಕರ್ ಖಾತೆ- ಪಹಣಿ ಮಾಡಿಸಲು ಮುಂದಾಗಿದ್ದರು. ಆಗ ಮಹಿಳೆ ಸಬ್ ರಿಜಿಸ್ಟ್ರಾರ್ಗೆ ತಕರಾರು ನೀಡಿದ್ದರು. ಹೊಯ್ಸಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು ಡಿ.ಸುಧಾಕರ್ ಕುಟುಂಬ ಹೊಂದಿದ್ದು, ಸೇಲ್ ಡೀಡ್ ಆಧಾರದಲ್ಲಿ 25 ಕೋಟಿ ಸಾಲ ಪಡೆದುದಾಗಿ ವಿವರ ನೀಡಿದರು.

ಯಾವುದೇ ಸೊಸೈಟಿ 5-10 ಲಕ್ಷ ಸಾಲ ಪಡೆಯಬಹುದು. ಮಗನೇ ಚೇರ್ಮ್ಯಾನ್ ಆಗಿರುವ 7 ಹಿಲ್ಸ್ ಕಂಪೆನಿಯ ಮೂಲಕ ಸಾಲ ಪಡೆಯಲಾಗಿತ್ತು. ಚುನಾವಣೆ ವೇಳೆ ಇದನ್ನು ವಿವರಿಸಿದ್ದಾರೆ. ಸಹಕಾರ ಸಂಸ್ಥೆಯು ರೆವಿನ್ಯೂ ದಾಖಲೆ ಇಲ್ಲದೆ ಸಾಲ ಕೊಡಲು ಅಸಾಧ್ಯ ಎಂದರು. ಸಚಿವರಾದ ಬಳಿಕ ಜಿಲ್ಲಾಧಿಕಾರಿ, ಎ.ಸಿ.ಯಿಂದ ತಹಶೀಲ್ದಾರರಿಗೆ ಒತ್ತಡ ಹಾಕಿ ರಾತ್ರೋರಾತ್ರಿ ಖಾತೆ, ಪಹಣಿ ಮಾಡಿಸಿದ್ದಾರೆ ಎಂದು ತಿಳಿಸಿದರು.

ಮನೆ ಒಡೆದು ವಾಸ ಇದ್ದವರ ತೆರವಿಗೆ ಮುಂದಾದಾಗ ಹಲ್ಲೆ ನಡೆಸಲಾಗಿದೆ. ಅನೇಕರು ಆಸ್ಪತ್ರೆಗಳಲ್ಲಿದ್ದಾರೆ. ಪೊಲೀಸರು ಅಮಾನತಾಗುವ ಭಯದಿಂದ ಎಫ್ಐಆರ್ ದಾಖಲಿಸಿದ್ದಾರೆ. ಇದರ ಹಿಂದೆ ಬಿಜೆಪಿ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಒಬ್ಬ ಬಡಪಾಯಿ ಮಹಿಳೆಗೆ ಅನ್ಯಾಯ ಆಗಬಾರದು ಎಂಬ ಕಳಕಳಿ ನಮ್ಮದು. ಇದು ವಂಚನೆ ಪ್ರಕರಣ. ಸುಧಾಕರ್ ಒಬ್ಬ ವಂಚಕ ಎಂದು ಆರೋಪ ಮಾಡಿದರು.

ಇಂಥ ವಂಚಕರನ್ನು ನೀವು ರಕ್ಷಿಸುತ್ತೀರಾ? ಈ ಸರಕಾರವೂ ವಂಚಕರ ಸರಕಾರ ಎಂದು ಟೀಕಿಸಿದರು. ಒಬ್ಬ ಕಳ್ಳನಿಗೆ ಮತ್ತೊಬ್ಬನ ಬೆಂಬಲವೇ ಎಂದು ಕೇಳಿದರು. ಸರಕಾರ ನೊಂದವರಿಗೆ ನ್ಯಾಯ ಕೊಡಬೇಕು. ಈಗ ಯಾರಿಗೆ ನ್ಯಾಯ ಕೊಡುತ್ತಿದ್ದೀರಿ. ಒದೆ ತಿಂದವರು, ಭೂಮಿ ಕಳಕೊಂಡವರ ಪರ ಯಾಕೆ ಸರಕಾರ ನಿಂತಿಲ್ಲ? ಅದರ ಬದಲಾಗಿ ದೌರ್ಜನ್ಯ ಮಾಡಿದವರನ್ನು ರಕ್ಷಿಸುತ್ತಿದೆಯಲ್ಲವೇ ಎಂದು ಆಕ್ಷೇಪಿಸಿದರು.

ಭೂಕಬಳಿಕೆದಾರರ ಪರವಾಗಿ ನಿಂತ ಈ ಸರಕಾರ ವಂಚಕರ ಸರಕಾರ ಎಂದು ದೂರಿದರು. ದಲಿತರು ಸುಳ್ಳು ಕೇಸು ಕೊಡುತ್ತಾರೆ ಎಂದು ಡಿಸಿಎಂ ಹೇಳಿದ್ದಾರೆ. ಮಾತೆತ್ತಿದರೆ ದಲಿತರ ಪರ, ದಲಿತರ ಸಂರಕ್ಷಕರು ಎನ್ನುವ ನೀವು ದಲಿತರ ಭಕ್ಷಕರು ಎಂದು ಟೀಕಿಸಿದರು. ಈ ಸರಕಾರದಲ್ಲಿ ದಲಿತರಿಗೆ ಮೂರು ಕಾಸಿನ ಬೆಲೆಯೂ ಇಲ್ಲ; ರಕ್ಷಣೆಯೂ ಇಲ್ಲ ಎಂದರು.

ಕಳ್ಳನಿಗೊಬ್ಬ ಕಳ್ಳನ ಬೆಂಬಲ ಎಂಬಂತಾಗಿದೆ. ಕಳ್ಳ ಮಳ್ಳನ ಕಥೆ ಇದು. ಬಿಜೆಪಿ ದಲಿತರ ಪರವಾಗಿ ಸದಾ ನಿಲ್ಲಲಿದೆ. ಅವರಿಗೆ ನ್ಯಾಯ, ಆ ಭೂಮಿ ಮತ್ತೆ ಅವರಿಗೆ ಸಿಗಬೇಕು. ಕೋಲಾರ ಜಿಲ್ಲೆ ನರಸಾಪುರದಲ್ಲಿ ಸರ್ವೇ ನಂಬರ್ 18ರಲ್ಲಿ 5 ಎಕರೆ ಜಾಗದ ವಿಷಯದಲ್ಲೂ ಇದೇ 7 ಹಿಲ್ಸ್ ಕಂಪೆನಿಯಿಂದ ವಂಚನೆ ಆಗಿದೆ. 3.5 ಕೋಟಿ ಮೊತ್ತದ ಚೆಕ್ಗಳು ಬೌನ್ಸ್ ಆಗಿವೆ. ಅಲ್ಲೂ ಬೆದರಿಕೆ ಹಾಕಿದ್ದಾರೆ ಎಂದು ವಿವರ ನೀಡಿದರು.

75 ವರ್ಷದ ಆ ಬಡ ಮಹಿಳೆಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದರು. ಈ ಪ್ರಕರಣ ಹದ್ದು ಬಂದು ಹೊಡೆದುಕೊಂಡು ಹೋದಂತಾಗಿದೆ. ಸರಕಾರಕ್ಕೆ ಇದು ಅರ್ಥವಾಗುವುದಿಲ್ಲವೇ ಎಂದು ಕೇಳಿದರು. ಸುಧಾಕರ್ ರಾಜೀನಾಮೆ ಪಡೆಯದಿದ್ದಲ್ಲಿ ನಾವು ವಿರಮಿಸುವುದಿಲ್ಲ. ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ನುಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಇತ್ತೀಚಿನ ಸುದ್ದಿ

Exit mobile version