ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಬಿಜೆಪಿ ಮುಖಂಡ ಅರೆಸ್ಟ್!

ಮಂಡ್ಯ: ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ 2022ರಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದ ರವಿ ಎಂಬಾತನನ್ನು ಮಂಡ್ಯದ ಪಶ್ಚಿಮ ಠಾಣಾ ಪೊಲೀಸರು ಬಂಧಿಸಿದ್ದಾರೆ.
ವಿಧಾನಸೌಧದಲ್ಲಿ ಪಾಕ್ ಪರ ಫೋಷಣೆ ಕೂಗಿರೋದು ದೃಢಪಟ್ಟ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ನಡುವೆ ಮಂಡ್ಯದಲ್ಲಿ 2022ರಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಬಿಜೆಪಿ ಮುಖಂಡ ರವಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದ ವಿಚಾರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಮಾತನಾಡಲು ಒಂದು ಅಸ್ತ್ರ ಸಿಕ್ಕಂತಾಗಿತ್ತು. ಇದೇ ವೇಳೆ 2022ರಲ್ಲಿ ಮಂಡ್ಯದ ಸಂಜಯ್ ಸರ್ಕಲ್ ನಲ್ಲಿ ಬಿಜೆಪಿ ನಡೆಸಿದ್ದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ರವಿ ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ್ದರು. ಆದರೆ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿರಲಿಲ್ಲ. ಇದೀಗ ಕಾಂಗ್ರೆಸ್ ನ್ನು ಬೀಳಿಸಲು ತೆಗೆದ ಗುಂಡಿಯಲ್ಲಿ ಬಿಜೆಪಿ ಕೂಡ ಬಿದ್ದಂತಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ಹನಿಂಬಾಡಿ ಕುಮಾರ್ ಎಂಬವರು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ರವಿ ವಿರುದ್ಧ ದೂರು ನೀಡಿದ್ದಾರೆ. ಎ1 ಆರೋಪಿ ಶಿವಕುಮಾರ್ ಆರಾಧ್ಯ ಹಾಗೂ ಎ2 ಆರೋಪಿ ರವಿ ಸೇರಿದಂತೆ ಇತರರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ರವಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಬಲ ನೀಡಲು ಕೆಲವು ಸುದ್ದಿ ವಾಹಿನಿಗಳು ನಿರಂತರವಾಗಿ ರಾಜ್ಯ ಸರ್ಕಾರವನ್ನು ಟೀಕಿಸುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಪಾಕ್ ಪರ ಘೋಷಣೆ ಕೂಗಿದ ವಿಚಾರವನ್ನು ಮಾಧ್ಯಮಗಳು ಬೃಹತ್ ಮಟ್ಟದಲ್ಲಿ ಚರ್ಚೆಗೀಡು ಮಾಡಿದ್ದು, ಬಿಜೆಪಿ ಪರ ಅಭಿಪ್ರಾಯ ಮೂಡಿಸುವ ಒಂದು ಪ್ರಯತ್ನವಾಗಿಯೂ ನಡೆದಿತ್ತು. ಇದೀಗ ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರು ಮತ್ತು ಬಿಜೆಪಿಯ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಎರಡೂ ತಂಡಗಳನ್ನೂ ಬಂಧಿಸುವ ಮೂಲಕ ಸರ್ಕಾರ ಬಿಜೆಪಿ ಹಾಗೂ ಕೆಲವು ಮಾಧ್ಯಮಗಳ ವಾದಕ್ಕೆ ತಿರುಗೇಟು ನೀಡಿದೆ. ಪಾಕಿಸ್ತಾನಕ್ಕೆ ಘೋಷಣೆ ಕೂಗೋದು ಅಪರಾಧವಾದರೆ, ಯಾವ ಕೋಮಿನವರೂ ಕೂಗಿದರೂ ಅದು ತಪ್ಪು ಎನ್ನುವ ಸ್ಪಷ್ಟ ಸಂದೇಶವನ್ನು ಸರ್ಕಾರ ನೀಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth