ಮೋದಿ ಕಿ ಗ್ಯಾರಂಟಿ: ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಿಜೆಪಿ

ದೆಹಲಿ: ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಯೋಜನೆಗಳನ್ನು ರೂಪಿಸಿರುವ ಭಾರತೀಯ ಜನತಾ ಪಕ್ಷ–BJP “ಮೋದಿ ಕಿ ಗ್ಯಾರಂಟಿ” ಎಂಬ ಟ್ಯಾಗ್ ಲೈನ್ ನೊಂದಿಗೆ ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಸಚಿವ ರಾಜನಾಥ್ ಸಿಂಗ್ ಅವರು ಲೋಕಸಭಾ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಪ್ರದರ್ಶಿಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ 27 ಸದಸ್ಯರ ಪ್ರಣಾಳಿಕೆ ಸಮಿತಿಯನ್ನು ಬಿಜೆಪಿ ನೇಮಿಸಿತ್ತು. ಸಾಮಾಜಿಕ ಮಾಧ್ಯಮ ಅಭಿಯಾನಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಜನರಿಂದ ಅಭಿಪ್ರಾಯ ಸಂಗ್ರಹಿಸಿದ ನಂತರ ಅದರ ಬಗ್ಗೆ ಬಿಜೆಪಿ ನಾಯಕರು ಚರ್ಚೆ ನಡೆಸಿದ ಬಳಿಕ ಅಂತಿಮವಾಗಿ ಇಂದು (ಏಪ್ರಿಲ್ 14, ಭಾನುವಾರ) ಬಿಜೆಪಿ ಲೋಕಸಭಾ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಡೀ ದೇಶ ಬಿಜೆಪಿಯ ಸಂಕಲ್ಪ ಪತ್ರಕ್ಕಾಗಿ ಕಾಯುತ್ತಿದೆ. ಪಕ್ಷವು 10 ವರ್ಷಗಳಲ್ಲಿ ತನ್ನ ಭರವಸೆಗಳನ್ನು ಕಾರ್ಯಗತಗೊಳಿಸಿದೆ. ಈ ಸಂಕಲ್ಪ ಪತ್ರವು ಅಭಿವೃದ್ಧಿ ಹೊಂದಿದ ಭಾರತದ ನಾಲ್ಕು ಬಲವಾದ ಸ್ತಂಭಗಳಾದ ಯುವಕರು, ಮಹಿಳೆಯರು, ಬಡವರು ಮತ್ತು ರೈತರನ್ನು ಸಬಲೀಕರಣಗೊಳಿಸುತ್ತದೆ” ಎಂದು ಹೇಳಿದರು.
60 ಸಾವಿರ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿದ್ದೇವೆ: ನಡ್ಡಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾತನಾಡಿ, “60,000 ಹೊಸ ಗ್ರಾಮಗಳನ್ನು ಪಕ್ಕಾ ರಸ್ತೆಗಳೊಂದಿಗೆ ಸಂಪರ್ಕಿಸುವ ಕೆಲಸ ಮಾಡಲಾಗಿದೆ. ಎಲ್ಲಾ ಹವಾಮಾನದ ಪರಿಸ್ಥಿತಿಯನ್ನು ತಡೆದುಕೊಳ್ಳುವ ರಸ್ತೆಗಳನ್ನು ನಿರ್ಮಿಸಲಾಗಿದೆ. ಗ್ರಾಮಗಳು ಸಶಕ್ತವಾಗುತ್ತವೆ. ಭಾರತದ ಜನಸಂಖ್ಯೆಯ 25 ಕೋಟಿ ಜನರು ಈಗ ಬಡತನ ರೇಖೆಗಿಂತ ಮೇಲಕ್ಕೆ ಏರಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಪ್ರಕಾರ, ಭಾರತದಲ್ಲಿ ತೀವ್ರ ಬಡತನವು ಈಗ ಶೇಕಡಾ 1 ಕ್ಕಿಂತ ಕಡಿಮೆಯಾಗಿದೆ ಎಂದಿದ್ದಾರೆ.
ರಾಜನಾಥ್ ಸಿಂಗ್ ಮಾತನಾಡಿ, ಬಿಜೆಪಿ “ಸಂಕಲ್ಪ ಪತ್ರ” ದಿಂದ ಪ್ರತಿಯೊಂದು ಭರವಸೆಗಳನ್ನು ಈಡೇರಿಸಿದೆ ಎಂಬುದರ ಬಗ್ಗೆ ಪಕ್ಷಕ್ಕೆ ಹೆಮ್ಮೆ ಇದೆ. “ಜೋ ಹಮ್ ಕೆಹ್ತೆ ಹೈ, ವೋ ಹಮ್ ಕಾರ್ಟೆ ಹೈ. ನಮ್ಮ ಮಾತು ಮತ್ತು ಕೃತಿಗಳ ನಡುವೆ ಎಂದಿಗೂ ವ್ಯತ್ಯಾಸವಿಲ್ಲ. ಬಿಜೆಪಿಯವರು ಮಾತ್ರವಲ್ಲ, ಇಡೀ ದೇಶದ ನಾಗರಿಕರು ಸಹ ಇದನ್ನು ನಂಬಲು ಪ್ರಾರಂಭಿಸಿದ್ದಾರೆ. ಈ ವಿಶ್ವಾಸಾರ್ಹತೆ ನಮ್ಮ ದೊಡ್ಡ ಶಕ್ತಿ” ಎಂದು ಹೇಳಿದರು.
ಬಿಜೆಪಿ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಮೋದಿ ಅವರು ಕೇಂದ್ರ ಸರ್ಕಾರದ ಯೋಜನೆಗಳ ಕೆಲವು ಫಲಾನುಭವಿಗಳನ್ನು ಭೇಟಿಯಾಗಿ ಪ್ರಣಾಳಿಕೆಯ ಪ್ರತಿಯನ್ನು ಹಸ್ತಾಂತರಿಸಿದರು.
2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ: ಪ್ರಮುಖ ಅಂಶಗಳು
* ಮುಂದಿನ 5 ವರ್ಷಗಳವರೆಗೆ ಉಚಿತ ಪಡಿತರ ಯೋಜನೆ ಮುಂದುವರಿಸುವುದು
* ಮುದ್ರಾ ಯೋಜನೆಯಡಿ 10 ಲಕ್ಷ ರೂ.ಗಳವರೆಗೆ ಸಾಲವನ್ನು ಒದಗಿಸಲಾಗುತ್ತಿದೆ. ಈಗ ಈ ಮಿತಿಯನ್ನು 20 ಲಕ್ಷ ರೂ.ಗೆ ಹೆಚ್ಚಿಸುವುದು.
* 75 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯನ್ನು ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ತರುವುದು.
* ತೃತೀಯ ಲಿಂಗಿ ಸಮುದಾಯವನ್ನು ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ತರುವುದು.
* 1) ಸಾಮಾಜಿಕ ಮೂಲಸೌಕರ್ಯ, 2) ಡಿಜಿಟಲ್ ಮೂಲಸೌಕರ್ಯ, 3) ಭೌತಿಕ ಮೂಲಸೌಕರ್ಯ ಎಂಬ ಮೂರು ರೀತಿಯ ಮೂಲಸೌಕರ್ಯಗಳ ಮೂಲಕ 21 ನೇ ಶತಮಾನದ ಭಾರತದ ಅಡಿಪಾಯವನ್ನು ಬಲಪಡಿಸುವುದು.
* ಡಿಜಿಟಲ್ ಮೂಲಸೌಕರ್ಯದ ಅಡಿಯಲ್ಲಿ 5 ಜಿ ನೆಟ್‌ವರ್ಕ್ ವಿಸ್ತರಣೆ. 6 ಜಿ ಗಾಗಿ ಕೆಲಸ ಆರಂಭ, ಡಿಜಿಟಲ್ ಮೂಲಸೌಕರ್ಯ ನಿರ್ಮಾಣ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth