ಬಿಜೆಪಿಗರ ದ್ವಂದ್ವ ನೀತಿ: ಹಿಂದೂ ಮಹಿಳೆ ಸ್ನಾನ ಮಾಡುತ್ತಿದ್ದ ವಿಡಿಯೋ ಚಿತ್ರೀಕರಣದ ಬಗ್ಗೆ ಯಾಕೆ ಮೌನ?:  ವೇರೊನಿಕಾ ಕರ್ನೆಲಿಯೋ ಪ್ರಶ್ನೆ

veronica cornelio
06/08/2023

ಉಡುಪಿಯ ಪ್ರಕರಣವನ್ನು ರಾಷ್ಟ್ರವ್ಯಾಪಿ ಸುದ್ದಿಯಾಗುವಂತೆ ಪ್ರತಿಭಟಿಸಿದ ಬಿಜೆಪಿ ಹಾಗೂ ಸಂಘಪರಿವಾರದ ಮುಖಂಡರು ಮುಲ್ಕಿಯ ಪಕ್ಷಿಕೆರೆ ಎಂಬಲ್ಲಿ ಹಿಂದೂ ಮಹಿಳೆಯೊಬ್ಬರು ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುವುದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ ಪ್ರಕರಣದ ವಿಚಾರದಲ್ಲಿ ಯಾಕೆ ಮೌನ ವಹಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರರಾದ ವೇರೊನಿಕಾ ಕರ್ನೆಲಿಯೋ ಪ್ರಶ್ನಿಸಿದ್ದಾರೆ.

ಮಹಿಳೆಯನ್ನು ದೇವರೆಂದು ಪೂಜಿಸುವ ಬಿಜೆಪಿಗರಿಗೆ ಆಕೆಗೆ ಅವಮಾನ ಆದಾಗ ಆರೋಪಿಯ ಜಾತಿ ಧರ್ಮ ಮೊದಲು ನೋಡಿ ಮತ್ತೆ ಪ್ರತಿಭಟನೆ ಮಾಡುವುದು ಎನ್ನುವುದು ಇದರಲ್ಲಿ ಎದ್ದು ಕಾಣುತ್ತದೆ. ಮುಲ್ಕಿಯಲ್ಲಿ ಅವಮಾನಕ್ಕೆ ಒಳಗಾದ ಮಹಿಳೆ ಕೂಡ ಒಂದು ಹೆಣ್ಣು ಎನ್ನುವುದು ಇವರಿಗೆ ತಿಳಿದಿಲ್ಲವೆ? ವಿಟ್ಲದಲ್ಲಿ ಅಮಾಯಕ ಅಪ್ರಾಪ್ತ ದಲಿತ ಬಾಲಕಿ ಮೇಲೆ ಕೂಡ ಸಂಘಟನೆಗೆ ಸೇರಿದ್ದಾರೆ ಎನ್ನುವ ಯುವಕರು ಅಮಾನುಷವಾಗಿ ಅತ್ಯಾಚಾರವೆಸಗಿದಾಗ ಕೂಡ ಬಿಜೆಪಿ ಹಾಗೂ ಸಂಘಪರಿವಾರದವರ ಬಾಯಿಗೆ ಬೀಗ ಬಿದ್ದಿರುವುದು ಇವರ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಸಂಪೂರ್ಣವಾಗಿ ನಿರುದ್ಯೋಗಿಗಳಾಗಿರುವ ಬಿಜೆಪಿಗರು ಸುಳ್ಳು ವಿಚಾರಗಳನ್ನು ಕೈಗೆತ್ತಿಕೊಂಡು ಗಲಭೆ ಎಬ್ಬಿಸುವುದೇ ಮುಖ್ಯ ಉದ್ದೇಶ ಎಂಬ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯ. ಉಡುಪಿ ಘಟನೆಯಾದಾಗ ಕೇವಲ ಸುದ್ದಿಗೋಷ್ಠಿ ನಡೆಸುವ ಸಲುವಾಗಿ ದೆಹಲಿಯಿಂದ ಉಡುಪಿಗೆ ಓಡೋಡಿ ಬಂದ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ವಿಟ್ಲ ಅಥವಾ ಮುಲ್ಕಿ ಘಟನೆ ಬಗ್ಗೆ ಮಾಹಿತಿಯೇ ಇಲ್ಲವೆಂಬಂತೆ ಮೌನವಾಗಿದ್ದಾರೆ. ಬಿಜೆಪಿಯ ಸಂಸದ ನಳಿನ್ ಕುಮಾರ್ ಕಟೀಲ್, ಇತರ ಎಲ್ಲಾ ಉಡುಪಿ ಮತ್ತು ಮಂಗಳೂರಿನ  ಶಾಸಕರು ಘಟನೆಯ ಬಗ್ಗೆ ತುಟಿ ಬಿಚ್ಚದಿರುವುದು ಇವರಿಗೆ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರವಾಗಿದೆ.  ಘಟನೆಯಲ್ಲಿ ಬಂಧಿತರಾದ ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡುವಲ್ಲಿ ರಾಜ್ಯ ಸರಕಾರ ಬದ್ಧವಾಗಿದ್ದು ಕನಿಷ್ಠ ಬಿಜೆಪಿ ಶಾಸಕರು ಈ ಘಟನೆಯ ವಿರುದ್ದ ದನಿ ಎತ್ತುವ ಸೌಜನ್ಯ ತೋರಿಸಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version