UPI ಕ್ಯೂರ್ ಕೋಡ್ ದುರ್ಬಳಕೆ: ಸ್ವಂತ ಖಾತೆಗೆ ಹಣ ಹಾಕಿಸಿದ ಕಂಡೆಕ್ಟರ್ ಗಳ ಅಮಾನತು!
ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್‌ಗಳಲ್ಲಿ ಅಳವಡಿಸಲಾಗಿರುವ ಯುಪಿಐ (UPI) ಕ್ಯೂರ್ ಕೋಡ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು, ಸರ್ಕಾರದ ಹಣವನ್ನು ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ ನಾಲ್ವರು ನಿರ್ವಾಹಕರನ್ನು (ಕಂಡಕ್ಟರ್) ಬಿಎಂಟಿಸಿ ಅಮಾನತುಗೊಳಿಸಿದೆ.
ಏನಿದು ಪ್ರಕರಣ? ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆಯನ್ನು ತಪ್ಪಿಸಲು ಬಿಎಂಟಿಸಿ ಯುಪಿಐ ಸ್ಕ್ಯಾನರ್‌ಗಳನ್ನು ಅಳವಡಿಸಿದೆ. ಆದರೆ ಕೆಲವು ಕಿಲಾಡಿ ಕಂಡಕ್ಟರ್‌ಗಳು ಈ ಅಧಿಕೃತ ಸ್ಕ್ಯಾನರ್‌ಗಳನ್ನು ಕಿತ್ತು ಹಾಕಿ ಅಥವಾ ಮರೆಮಾಚಿ, ಅದರ ಜಾಗದಲ್ಲಿ ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್‌ಗಳನ್ನು ಪ್ರದರ್ಶಿಸುತ್ತಿದ್ದರು. ಪ್ರಯಾಣಿಕರು ಟಿಕೆಟ್ ಹಣವನ್ನು ಸ್ಕ್ಯಾನ್ ಮಾಡಿದಾಗ ಆ ಹಣವು ಬಿಎಂಟಿಸಿ ಖಾತೆಗೆ ಹೋಗುವ ಬದಲು ನೇರವಾಗಿ ಕಂಡಕ್ಟರ್‌ಗಳ ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿತ್ತು.
ಅಮಾನತುಗೊಂಡವರು ಯಾರು? ಈ ಕಳ್ಳಾಟದಲ್ಲಿ ಭಾಗಿಯಾಗಿದ್ದ ಮಂಚೇಗೌಡ, ಸುಪ್ರೀತ, ಅಶ್ವಕ್ ಖಾನ್ ಮತ್ತು ಸುರೇಶ್ ಎಂಬ ನಾಲ್ವರು ನಿರ್ವಾಹಕರನ್ನು ಸಂಸ್ಥೆಯ ಎಂಡಿ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.
ಅನ್ಯಭಾಷಿಕರನ್ನೇ ಟಾರ್ಗೆಟ್: ಈ ಕಂಡಕ್ಟರ್‌ಗಳು ಮುಖ್ಯವಾಗಿ ಕನ್ನಡ ಬಾರದ ಹೊರರಾಜ್ಯದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡಿದ್ದರು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುವ ‘ಉಚಿತ ಟಿಕೆಟ್’ ಮೇಲೆ ಕನ್ನಡದಲ್ಲಿ ಮಾತ್ರ ‘ಉಚಿತ’ ಎಂದು ಮುದ್ರಿಸಲಾಗಿರುತ್ತದೆ. ಇದನ್ನು ಬಳಸಿಕೊಂಡು, ಕನ್ನಡ ಬಾರದವರಿಗೆ ಫ್ರೀ ಟಿಕೆಟ್ ನೀಡಿ ಅವರಿಂದ ಹಣ ಪಡೆದು ತಮ್ಮ ವೈಯಕ್ತಿಕ ಯುಪಿಐ ಖಾತೆಗೆ ಹಾಕಿಸಿಕೊಳ್ಳುತ್ತಿದ್ದರು.
ಲಕ್ಷಾಂತರ ರೂಪಾಯಿ ವಂಚನೆ: ತನಿಖೆಯ ವೇಳೆ ಕಂಡಕ್ಟರ್ ಮಂಚೇಗೌಡನ ಖಾತೆಗೆ 51 ಸಾವಿರ ರೂ., ಸುರೇಶ್ ಖಾತೆಗೆ 45 ಸಾವಿರ ರೂ., ಸುಪ್ರೀತ ಖಾತೆಗೆ 30 ಸಾವಿರ ರೂ. ಹಾಗೂ ಅಶ್ವಕ್ ಖಾನ್ ಖಾತೆಗೆ 3 ಸಾವಿರ ರೂ. ಸೇರಿದಂತೆ ಒಟ್ಟು ಒಂದು ಲಕ್ಷಕ್ಕೂ ಅಧಿಕ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























