ಕಿಚ್ಚ ಸುದೀಪ್ ಗೆ ಸಂಕಷ್ಟ: 10 ವರ್ಷಗಳ ಹಳೆಯ ಕೇಸ್‌ನಲ್ಲಿ ವಂಚನೆ ಆರೋಪ!
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ಯಶಸ್ವಿ ಸಮಾರೋಪದ ಬೆನ್ನಲ್ಲೇ ನಟ ಕಿಚ್ಚ ಸುದೀಪ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಸುಮಾರು 10 ವರ್ಷಗಳ ಹಿಂದೆ ನಡೆದ ‘ವಾರಸ್ದಾರ’ ಧಾರಾವಾಹಿ ಚಿತ್ರೀಕರಣಕ್ಕೆ ಸಂಬಂಧಿಸಿದ ವಂಚನೆ ಆರೋಪ ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ಸುದೀಪ್ ಮತ್ತು ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ದಾಖಲಾಗಿದೆ.
ಪ್ರಕರಣದ ಹಿನ್ನೆಲೆ: 2016ರಲ್ಲಿ ಸುದೀಪ್ ನಿರ್ಮಾಣದ ‘ವಾರಸ್ದಾರ’ ಧಾರಾವಾಹಿಯ ಚಿತ್ರೀಕರಣಕ್ಕಾಗಿ ದೀಪಕ್ ಮಯೂರ್ ಎಂಬುವವರ ಮನೆಯನ್ನು ಬಾಡಿಗೆಗೆ ಪಡೆಯಲಾಗಿತ್ತು. ಈ ಸಂದರ್ಭದಲ್ಲಿ ಕಾಫಿ ತೋಟದ ಮರ-ಗಿಡಗಳನ್ನು ಕಡಿಯಲಾಗಿದೆ ಮತ್ತು ಮನೆಗೆ ಹಾನಿ ಮಾಡಲಾಗಿದೆ ಎಂದು ದೀಪಕ್ ಆರೋಪಿಸಿದ್ದರು. ಅಲ್ಲದೆ, ಬಾಡಿಗೆ ಹಣವನ್ನೂ ಸರಿಯಾಗಿ ಪಾವತಿಸಿಲ್ಲ ಎಂದು ಅವರು ಈ ಹಿಂದೆ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈಗಿನ ದೂರು ಏನು? ದೀಪಕ್ ಮಯೂರ್ ನೀಡಿರುವ ದೂರಿನ ಪ್ರಕಾರ, 2023ರಲ್ಲಿ ಪ್ರಕರಣವನ್ನು ರಾಜಿಯಾಗುವಂತೆ ಸುದೀಪ್ ಮತ್ತು ಚಕ್ರವರ್ತಿ ಚಂದ್ರಚೂಡ್ ಭರವಸೆ ನೀಡಿದ್ದರು. ಕೇಸ್ ವಾಪಸ್ ಪಡೆದರೆ 60 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಚಕ್ರವರ್ತಿ ಅವರು 10 ಲಕ್ಷ ರೂಪಾಯಿಯ ಚೆಕ್ ನೀಡಿದ್ದರಿಂದ, ವಿಶ್ವಾಸದ ಮೇಲೆ ದೀಪಕ್ ಕೇಸ್ ಹಿಂಪಡೆದಿದ್ದರು.
ಆದರೆ, ಕೇಸ್ ವಾಪಸ್ ಪಡೆದ ನಂತರ ಬಾಕಿ ಹಣವನ್ನು ನೀಡದೆ ಸುದೀಪ್ ಮತ್ತು ತಂಡದವರು ವಂಚಿಸಿದ್ದಾರೆ ಎಂದು ದೀಪಕ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಚಕ್ರವರ್ತಿ ಅವರು ತಮ್ಮ ನಂಬರ್ ಬ್ಲಾಕ್ ಮಾಡಿದ್ದಾರೆ ಮತ್ತು ಸುದೀಪ್ ಪರವಾಗಿ ಮಾತನಾಡುವಂತೆ ಬಲವಂತವಾಗಿ ವಿಡಿಯೋ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಈ ಪ್ರಕರಣ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದಾಖಲಾಗಿದ್ದು, ಸುದೀಪ್ ಅವರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























