ನಿಮ್ಮ ಸ್ವಂತ ಊರಿನ ಮೇಯರ್ ನ್ನು ಬದಲಿಸಲಾಗದವರು ಇರಾನ್ ಆಡಳಿತ ಬದಲಿಸ್ತೀರಾ?: ಟ್ರಂಪ್ ಗೆ ಇರಾನ್ ಛಡಿಯೇಟು!
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನಲ್ಲಿ ಆಡಳಿತ ಬದಲಾವಣೆಯ (Regime Change) ಕುರಿತು ಮಾತನಾಡುತ್ತಿರುವುದಕ್ಕೆ ಇರಾನ್‌ನ ಉಪ ವಿದೇಶಾಂಗ ಸಚಿವ ಮಾಜಿದ್ ತಖ್ತ್–ರವಂಚಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಟ್ರಂಪ್ ಅವರ ಹೇಳಿಕೆಯನ್ನು ಲೇವಡಿ ಮಾಡಿರುವ ಅವರು, ಅಮೆರಿಕದ ಪ್ರಮುಖ ನಗರಗಳಲ್ಲಿ ಒಂದಾದ ನ್ಯೂಯಾರ್ಕ್‌ನ ಮೇಯರ್ ಅವರನ್ನೇ ನೇಮಿಸಲು ಅಸಮರ್ಥವಾಗಿರುವ ಟ್ರಂಪ್, ಇರಾನ್‌ನಂತಹ ಸಾರ್ವಭೌಮ ರಾಷ್ಟ್ರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.
ನ್ಯೂಯಾರ್ಕ್ ನಗರದ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಉಲ್ಲೇಖಿಸಿದ ರವಂಚಿ, ಟ್ರಂಪ್ ತಮ್ಮ ಸ್ವಂತ ಊರಿನ ಆಡಳಿತಾತ್ಮಕ ಗೊಂದಲಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದ್ದಾರೆ. ಇತ್ತೀಚೆಗೆ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಾಮ್ದಾನಿ ಅವರ ವಿಷಯದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಅವರು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.
ಇರಾನ್ ನಲ್ಲಿ ಆಡಳಿತ ಬದಲಾವಣೆ ತರುವ ಅಮೆರಿಕದ ಪ್ರಯತ್ನಗಳು ಎಂದಿಗೂ ಸಫಲವಾಗುವುದಿಲ್ಲ. ಇಂತಹ “ಹಳೆಯ ನೀತಿಗಳು” ಕೇವಲ ಅಸ್ಥಿರತೆಯನ್ನು ತರುತ್ತವೆ ಎಂದು ಇರಾನ್ ಎಚ್ಚರಿಸಿದೆ.
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಈ ಸಮಯದಲ್ಲಿ ಟ್ರಂಪ್ ಅವರ ಹೇಳಿಕೆಗಳು ಬೆಂಕಿಗೆ ತುಪ್ಪ ಸುರಿದಂತಿದೆ ಎಂದು ಇರಾನ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























