11:07 AM Saturday 23 - August 2025

ಏಷ್ಯನ್ ಗೇಮ್ಸ್​ನಲ್ಲಿ ಭಾರತ ಪರಾಕ್ರಮ: ಪಾಕಿಸ್ತಾನಕ್ಕೆ ಸೋಲುಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ

30/09/2023

ಚೀನಾದ ಹಾಂಗ್​ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್​ನ ಪುರುಷ ಹಾಕಿ ಕ್ವಾರ್ಟರ್ ​ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಜಯ ಗಳಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್​ಗೇರಿದೆ. ಗೊಂಗ್‌ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತ್ತು. 8ನೇ ನಿಮಿಷದಲ್ಲಿ ಅಭಿಷೇಕ್ ನೀಡಿದ ಉತ್ತಮ ಪಾಸನ್ನು ಮಂದೀಪ್ ಗೋಲಾಗಿ ಪರಿವರ್ತಿಸಿದರು.

ಇದರ ಬೆನ್ನಲ್ಲೇ 11ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಗೋಲಾಗಿಸುವಲ್ಲಿ ನಾಯಕ ಹರ್ಮನ್​ಪ್ರೀತ್ ಸಿಂಗ್ ಯಶಸ್ವಿಯಾದರು. ಅಲ್ಲದೇ ಭಾರತ ತಂಡವು 2-0 ಅಂತರದಿಂದ ಮೊದಲ ಕ್ವಾರ್ಟರ್​ ಅನ್ನು ಅಂತ್ಯಗೊಳಿಸಿತು. ಇನ್ನು ದ್ವಿತೀಯ ಸುತ್ತಿನ 17ನೇ ನಿಮಿಷದಲ್ಲೇ ಹರ್ಮನ್‌ಪ್ರೀತ್ ಸಿಂಗ್ ಡ್ರ್ಯಾಗ್ ಫ್ಲಿಕ್‌ನೊಂದಿಗೆ ಗೋಲು ಗಳಿಸಿದರು.

30ನೇ ನಿಮಿಷದಲ್ಲಿ ರಿವರ್ಸ್ ಸ್ಟಿಕ್ ಶಾಟ್‌ನೊಂದಿಗೆ ಸುಮಿತ್ ಚೆಂಡನ್ನು ಗೋಲು ಬಲೆಯತ್ತ ತಲುಪಿಸಿದರು. ಇದನ್ನು ಅತ್ಯಾಕರ್ಷಕವಾಗಿ ಗೋಲಾಗಿ ಪರಿವರ್ತಿಸುವಲ್ಲಿ ಗುರ್ಜಂತ್ ಯಶಸ್ವಿಯಾದರು. 33ನೇ ನಿಮಿಷದಲ್ಲಿ ಪಾಕ್ ಗೋಲ್ ಕೀಪರ್​ ಅನ್ನು ವಂಚಿಸಿದ ನಾಯಕ ಹರ್ಮನ್​ಪ್ರೀತ್ ಸಿಂಗ್ ಭಾರತ ತಂಡಕ್ಕೆ 5ನೇ ಯಶಸ್ಸು ತಂದುಕೊಟ್ಟರು. ಅಂದರೆ ಮೊದಲಾರ್ಧದಲ್ಲೇ ಭಾರತ ತಂಡವು 5-0 ಅಂತರದಿಂದ ಮುನ್ನಡೆ ಸಾಧಿಸಿತ್ತು.

ಈ ಮುನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಭಾರತೀಯ ಆಟಗಾರರು ಮೈದಾನದಲ್ಲಿ ವಿಜೃಂಭಿಸಿದರು. ಅತ್ತ ಪಾಕಿಸ್ತಾನ ಭಾರತೀಯ ಗೋಲಿನತ್ತ ಸತತ ದಾಳಿ ನಡೆಸಲು ಯತ್ನಿಸಿದರೂ ಚೆಂಡನ್ನು ಗೋಲು ಬಲೆಯತ್ತ ತಲುಪಿಸಲು ಮಾತ್ರ ಸಾಧ್ಯವಾಗಲಿಲ್ಲ.

34ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರನ್ನು ಟೀಮ್ ಇಂಡಿಯಾ ನಾಯಕ 6ನೇ ಗೋಲಾಗಿ ಪರಿವರ್ತಿಸಿದರು. ಇದರ ಬೆನ್ನಲ್ಲೇ ಆಕ್ರಮಣಕಾರಿಯಾಗಿ ಮುನ್ನುಗಿದ ಪಾಕ್ ಮುನ್ನಡೆ ಆಟಗಾರರು ಭಾರತದ ಗೋಲ್​ನತ್ತ ಸತತ ದಾಳಿ ಮಾಡಿದರು. ಪರಿಣಾಮ 38ನೇ ನಿಮಿಷದಲ್ಲಿ ಸುಫಿಯಾನ್ ಮುಹಮ್ಮದ್ ಬಾರಿಸಿದ ಪ್ರಬಲ ಡ್ರ್ಯಾಗ್ ಫ್ಲಿಕ್‌ ಭಾರತದ ಗೋಲು ಕೀಪರನ್ನು ವಂಚಿಸಿ ಗೋಲು ಬಲೆಯೊಳಗೆ ತಲುಪಿತು.

ಭಾರತದ ಪರ ವರುಣ್ ಕುಮಾರ್ 41ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. ಆದರೆ ಮೂರನೇ ಕ್ವಾರ್ಟರ್​ನ ಅಂತ್ಯದ ವೇಳೆಗೆ ಅಬ್ದುಲ್ ರಾಣಾ ಗೋಲುಗಳಿಸಿ ಅಂತರವನ್ನು 7-2 ಕ್ಕೆ ಇಳಿಸಿದರು. ಆದರೆ ಅಂತಿಮ ಸುತ್ತಿನ ಆರಂಭದಲ್ಲೇ ಶಂಶರ್ ರಿವರ್ಸ್ ಸ್ಟಿಕ್ ಶಾಟ್‌ನೊಂದಿಗೆ ಭಾರತಕ್ಕೆ 8ನೇ ಯಶಸ್ಸು ತಂದುಕೊಟ್ಟರು.
ಇನ್ನು 49ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ ಗೋಲು ಬಾರಿಸಿದರೆ, 53ನೇ ನಿಮಿಷದಲ್ಲಿ ವರುಣ್ ಕುಮಾರ್ ಚೆಂಡನ್ನು ಗುರಿಗೆ ತಲುಪಿಸಿದರು. ಈ ಮೂಲಕ 10-2 ಅಂತರದೊಂದಿಗೆ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಭಾರತೀಯ ಹಾಕಿ ಪಡೆ ಏಷ್ಯನ್ ಗೇಮ್ಸ್​ ಸೆಮಿಫೈನಲ್​ಗೇರಿದೆ.

ಭಾರತದ ಪರ ನಾಯಕ ಹರ್ಮನ್​ಪ್ರೀತ್ ಸಿಂಗ್ 4 ಗೋಲು ಬಾರಿಸಿದರು. ವರುಣ್ ಕುಮಾರ್ ಎರಡು, ಶಂಶೀರ್, ಮಂದೀಪ್, ಸುಮಿತ್, ಗುರ್ಜಂತ್ ತಲಾ ಒಂದು ಗೋಲು ಗಳಿಸಿ ಮಿಂಚಿದರು.

ಇತ್ತೀಚಿನ ಸುದ್ದಿ

Exit mobile version