ಮಳೆ ಆರಂಭಕ್ಕೂ ಮುನ್ನ ದಸರಾ ಅಂಬಾರಿ ಆನೆ ಅರ್ಜುನನ ಸಮಾಧಿ  ನಿರ್ಮಾಣಕ್ಕೆ ನಟ ದರ್ಶನ್ ಒತ್ತಾಯ

darshan
03/05/2024

ಬೆಂಗಳೂರು: ಕಳೆದ ವರ್ಷ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಮೃತಪಟ್ಟ ದಸರಾ ಅಂಬಾರಿ ಆನೆ ಅರ್ಜುನನ ಸಮಾಧಿಗೆ ದಿಕ್ಕು ದೆಸೆ ಇಲ್ಲದಂತೆ ಭಾಸವಾಗುತ್ತಿದೆ ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಇನ್‌ ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮಳೆಗಾಲ ಶುರುವಾಗುವ ಮುನ್ನ ಅರ್ಜುನನಿಗೆ ಸಮಾಧಿ ನಿರ್ಮಾಣ ಕೆಲಸ ಆರಂಭವಾಗಲಿ ಎನ್ನುವುದು ನನ್ನ ಕೋರಿಕೆ ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು–ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು” ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ಮೈಸೂರು ದಸರಾದಲ್ಲಿ ಎಂಟು ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ,  ಹಾಸನ ಜಿಲ್ಲೆಯಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಯುವಾಗ ಒಂಟಿ ಸಲಗದೊಂದಿಗೆ ನಡೆದ ಸಂಘರ್ಷದಲ್ಲಿ ತಿವಿತಕ್ಕೊಳಗಾಗಿ ಮೃತಪಟ್ಟಿತ್ತು.

ದರ್ಶನ್‌ ಪೋಸ್ಟ್‌ಗೆ ಸಾಕಷ್ಟು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ. “ನಿಮ್ಮ ಈ ಸಾಮಾಜಿಕ ಕಳಕಳಿಗೆ ಈ ನಿಮ್ಮ ಸೆಲೆಬ್ರಿಟಿಗಳು ಸದಾ ಸಿದ್ದ. ಪುಣ್ಯಾತ್ಮ ಕಣಯ್ಯ ನೀನು” “ಇದೇ ಕಾರಣಕ್ಕೇ ಬಾಸ್ ನಿಮ್ಮನ್ನ ಇಷ್ಟ ಪಡೋದು” “ಕೆಲವರು ತಾವು ತಮ್ಮ ಹೆಂಡ್ತಿ ಮಕ್ಕು ಚೆನ್ನಾಗಿದ್ರೆ ಸಾಕು ಅಂಥ ಯೋಚೆ ಮಾಡ್ತಿದ್ರೆ, ಅಲ್ಲೊಬ್ಬನ ಹೃದಯ ಮೂಕ ಪ್ರಾಣಿಗೆ ನ್ಯಾಯ ಕೊಡ್ಸೋಕೆ ಮಿಡಿತಿತ್ತು,, ನಿಜ್ವಾಗ್ಲೂ ನೀವು ದೇವ್ರು ಕಣಯ್ಯಾ ” “ಎಲ್ಲಾ ಇರೋವರೆಗೂ ಅಷ್ಟೇ… ಸತ್ತಮೇಲೆ ಬೆಲೆನೆ ಇಲ್ಲ.. ಅರ್ಜುನನ ಮರೆತೇ ಬಿಟ್ರು.. ಅರಣ್ಯ ಇಲಾಖೆ ಮತ್ತು ಸರ್ಕಾರ.. ಅರ್ಜುನನಿಗೆ ಒಂದು ಗೂಡು ಕಟ್ಟುವ ಕೆಲಸ ಮಾಡಿ… ನೀವು ಮಾಡಿರುವ ತಪ್ಪಿಗೆ ಪ್ರಾಯಶ್ಚಿತವಾದ್ರು ಸಿಗುತ್ತೆ” “ಮೂಕ ಪ್ರಾಣಿಗಳ ಪಾಲಿನ ಪುಣ್ಯಾತ್ಮ ಡಿ ಬಾಸ್” ಎಂದೆಲ್ಲ ದರ್ಶನ್‌ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಚಾಲೆಂಜಿಂಗ್‌ ಸ್ಟಾರ್‌ ಅಭಿನಯದ ಕಾಟೇರ ಸಿನಿಮಾ ಬಿಡುಗಡೆಗೆ ಕೆಲವು ದಿನಗಳ ಮುನ್ನ ದಸರಾ ಅಂಬಾರಿ ಆನೆ ಅರ್ಜುನಾ ಮೃತಪಟ್ಟಿತ್ತು. ಕಾಟೇರ ಸಿನಿಮಾವನ್ನು ಮೃತಪಟ್ಟ ಅರ್ಜುನ ಆನೆಗೆ ಅರ್ಪಿಸಲಾಗಿತ್ತು. “ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೈತ್ಯ ಮತ್ತು ದೈವ ಜೀವ ಅರ್ಜುನ– ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ” ಎಂದು ಕಾಟೇರ ಸಿನಿಮಾದ ಆರಂಭದಲ್ಲಿ ತೋರಿಸಲಾಗಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version