ನಿದ್ರಾವಸ್ಥೆಗೆ ಜಾರಲಿದೆಯಂತೆ ಚಂದ್ರನ ಅಂಗಳದಲ್ಲಿರುವ ರೋವರ್ ಪ್ರಗ್ಯಾನ್ ಮತ್ತು ಲ್ಯಾಂಡರ್ ವಿಕ್ರಮ್..!

ಈಗಾಗಲೇ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡ್ ಮಾಡಿ ಅನೇಕ ಕುತೂಹಲಕಾರಿ ವಿಷಯಗಳನ್ನು ಅನ್ವೇಷಣೆ ಮಾಡುತ್ತಿರುವ ರೋವರ್ ಪ್ರಗ್ಯಾನ್ ಮತ್ತು ಲ್ಯಾಂಡರ್ ವಿಕ್ರಮ್ ಸದ್ಯದಲ್ಲೇ ನಿದ್ರಾವಸ್ಥೆಗೆ ಜಾರಲಿವೆ.
ಚಂದ್ರನ ಮೇಲೆ ಇನ್ನು ರಾತ್ರಿ ಆರಂಭವಾಗುವ ಕಾರಣ ಇನ್ನೆರಡು ದಿನಗಳಲ್ಲಿ ರೋವರ್ ಮತ್ತು ಲ್ಯಾಂಡರ್‌ನ್ನು ನಿದ್ರಾವಸ್ಥೆಯಲ್ಲಿ ಇಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ತಿಳಿಸಿದ್ದಾರೆ. ಚಂದ್ರನ ಮೇಲೆ ಒಂದು ರಾತ್ರಿ ಅಂದರೆ ಭೂಮಿಯ 14 ದಿನಗಳು, ಚಂದ್ರನ ಮೇಲೆ ರಾತ್ರಿ ಅಂದರೆ ಅಲ್ಲಿನ ತಾಪಮಾನ -200 ಡಿಗ್ರಿ ಸೆಲ್ಶಿಯಸ್‌ವರೆಗೆ ಇರುತ್ತದೆ. ಹೀಗಾಗಿ ಈ ತಾಪಮಾನವನ್ನು ತಡೆದುಕೊಳ್ಳಲು ಹಾಗೂ ರೋವರ್ ಮತ್ತು ಲ್ಯಾಂಡರ್ ಎನರ್ಜಿ ಉಳಿಸಲು ಅವುಗಳನ್ನು ಸ್ಲೀಪಿಂಗ್ ಮೋಡ್‌ನಲ್ಲಿ ಇಡಲಾಗುವುದು ಎಂದು ತಿಳಿಸಿದ್ದಾರೆ.
14 ದಿನಗಳ ಬಳಿಕ ಚಂದ್ರನ ಮೇಲೆ ಮತ್ತೆ ಬೆಳಕಾದಾಗ ಪ್ರಗ್ಯಾನ್ ಮತ್ತು ವಿಕ್ರಮ್ ಮೇಲಿನ ಸೋಲಾರ್ ಪ್ಯಾನೆಲ್ ಚಾಲ್ತಿಗೊಳ್ಳಬಹುದು. ಚಾಲ್ತಿಯಾದರೆ ಆ ಮೂಲಕ ಇಂಧನ ಭರ್ತಿಯಾದರೆ ಮತ್ತೆ ಎಂದಿನಂತೆ ರೋವರ್ ಮತ್ತು ಲ್ಯಾಂಡರ್ ಕಾರ್ಯನಿರ್ವಹಿಸಲಿದೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ಮಾಹಿತಿ ನೀಡಿದ್ದಾರೆ.