9:26 PM Wednesday 7 - January 2026

ಕುಡಿದ ಮತ್ತಿನಲ್ಲಿ ಮಗನನ್ನೇ ಮಚ್ಚಿನಿಂದ ಕೊಚ್ಚಿದ ತಂದೆ: ರಾತ್ರಿಯಿಡೀ ಒದ್ದಾಡಿ ಪ್ರಾಣ ಬಿಟ್ಟ ಮಗ!

mudigere crime news
04/01/2026

ಮೂಡಿಗೆರೆ: ಮದ್ಯಪಾನದ ವ್ಯಸನವು ಒಂದು ಸುಂದರ ಕುಟುಂಬವನ್ನು ಹೇಗೆ ಹೈರಾಣು ಮಾಡುತ್ತದೆ ಎಂಬುದಕ್ಕೆ ಮೂಡಿಗೆರೆ ತಾಲೂಕಿನಲ್ಲಿ ನಡೆದ ಈ ಭೀಕರ ಘಟನೆಯೇ ಸಾಕ್ಷಿ. ಕುಡಿದ ಮತ್ತಿನಲ್ಲಿ ತಂದೆಯೇ ತನ್ನ ಮಗನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಪ್ರದೀಪ್ ಆಚಾರ್ (29) ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿದ ಆರೋಪಿ ಮೃತನ ತಂದೆ ರಮೇಶ್ ಆಚಾರ್.  ವರದಿಗಳ ಪ್ರಕಾರ, ತಂದೆ ಮತ್ತು ಮಗ ಇಬ್ಬರೂ ಮದ್ಯಪಾನಕ್ಕೆ ದಾಸರಾಗಿದ್ದರು. ಕ್ಷುಲ್ಲಕ ಕಾರಣಕ್ಕೆ ಪ್ರತಿದಿನ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ತಂದೆ-ಮಗನ ಈ ನಿರಂತರ ಜಗಳ ಮತ್ತು ಕಿರುಕುಳದಿಂದ ಬೇಸತ್ತ ಪ್ರದೀಪ್ ತಾಯಿ, ಕೆಲವು ದಿನಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದರು. ಅಂದಿನಿಂದ ತಂದೆ-ಮಗ ಇಬ್ಬರೇ ಮನೆಯಲ್ಲಿ ವಾಸವಿದ್ದರು.

ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣಬಿಟ್ಟ ಮಗ:

ಶನಿವಾರ ರಾತ್ರಿ ಕೂಡ ಮದ್ಯದ ಅಮಲಿನಲ್ಲಿ ಇಬ್ಬರ ನಡುವೆ ಜೋರಾಗಿ ಜಗಳ ನಡೆದಿದೆ. ಈ ವೇಳೆ ಆಕ್ರೋಶಗೊಂಡ ರಮೇಶ್ ಆಚಾರ್, ಮಚ್ಚಿನಿಂದ ಮಗ ಪ್ರದೀಪ್ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಪ್ರದೀಪ್ ಇಡೀ ರಾತ್ರಿ ರಕ್ತದ ಮಡುವಿನಲ್ಲಿ ಬಿದ್ದು, ಚಿಕಿತ್ಸೆ ಸಿಗದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬೆಳಗ್ಗೆ ಬೆಳಕಿಗೆ ಬಂದ ಕೃತ್ಯ:

ಇಂದು ಬೆಳಗ್ಗೆ ಆರೋಪಿ ರಮೇಶ್ ಆಚಾರ್ ಮಗನ ಮೃತದೇಹವನ್ನು ಮನೆಯ ಹಾಲಿನಿಂದ ಹೊರಾಂಗಣಕ್ಕೆ ಎಳೆದು ತರುತ್ತಿದ್ದಾಗ ಅಕ್ಕಪಕ್ಕದ ನಿವಾಸಿಗಳು ಗಮನಿಸಿದ್ದಾರೆ. ತಕ್ಷಣವೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀತೇಂದ್ರ ಕುಮಾರ್ ದಯಾಮ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಮೇಶ್ ಆಚಾರ್‌ನನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version