ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡುಕೋಣಗಳ ಅಟ್ಟಹಾಸ; ಮಲೆನಾಡಿಗರ ನಿದ್ದೆಗೆಡಿಸಿದ ‘ಕಾಟಿ’ ಹಾವಳಿ!

kati
22/04/2026

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ಹಾಗೂ ರೈತರು ಆತಂಕದ ನೆರಳಿನಲ್ಲಿ ಬದುಕುವಂತಾಗಿದೆ. ಕಾಫಿ ಮತ್ತು ಟೀ ಎಸ್ಟೇಟ್‌ಗಳನ್ನೇ ಬೀಡು ಮಾಡಿಕೊಂಡಿರುವ ಕಾಡುಕೋಣಗಳ ಹಿಂಡು, ಬೆಳೆ ನಾಶಪಡಿಸುವುದಲ್ಲದೆ ಜನರ ಪ್ರಾಣಕ್ಕೂ ಕುತ್ತು ತರುತ್ತಿವೆ.

ಕೊಪ್ಪ ತಾಲೂಕಿನ ಎಲೆಮಡಲು ಸಮೀಪದ ಟೀ ಎಸ್ಟೇಟ್‌ ನಲ್ಲಿ ಕಾಡುಕೋಣಗಳ ಹಿಂಡು ಮೊಕ್ಕಾಂ ಹೂಡಿದೆ. ಟೀ ಸೊಪ್ಪನ್ನು ತಿಂದು ತುಳಿದು ನಾಶಪಡಿಸುತ್ತಿದ್ದು, ಎಸ್ಟೇಟ್ ಮಾಲೀಕರಿಗೆ ಭಾರಿ ನಷ್ಟ ಉಂಟಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಟಿಗಳ ನಡುವಿನ ಕಾಳಗ: ಒಂದು ಸಾವು:

ಕಳಸ ತಾಲೂಕಿನಲ್ಲಿ ಕಾಡುಕೋಣಗಳ ನಡುವಿನ ಸಂಘರ್ಷವೊಂದು ದುರಂತದಲ್ಲಿ ಅಂತ್ಯಗೊಂಡಿದೆ. ಎರಡು ಕಾಟಿಗಳ ನಡುವೆ ನಡೆದ ಭೀಕರ ಕಾಳಗದಲ್ಲಿ, ಒಂದು ಕಾಟಿ ಸುಮಾರು 50 ಅಡಿ ಎತ್ತರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡಿದರೂ ಸಹ, ಫಲಕಾರಿಯಾಗದೆ ಕಾಡುಕೋಣ ಮೃತಪಟ್ಟಿದೆ.

ಮಲೆನಾಡಿನಲ್ಲಿ ಕಾಡುಕೋಣಗಳ ಹಾವಳಿ ಕೇವಲ ಬೆಳೆಗೆ ಸೀಮಿತವಾಗಿಲ್ಲ. ಕೇವಲ ಮೂರು ದಿನಗಳ ಹಿಂದಷ್ಟೇ ಕಾಡುಕೋಣವೊಂದು ದಾಳಿ ನಡೆಸಿದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದ ಘಟನೆ ಇನ್ನೂ ಹಸಿರಾಗಿರುವಾಗಲೇ, ನಿರಂತರವಾಗಿ ಈ ಪ್ರಾಣಿಗಳ ಸಂಚಾರ ಜನರಲ್ಲಿ ಭೀತಿ ಹುಟ್ಟಿಸಿದೆ.

“ಕಾಫಿ ತೋಟ ಮತ್ತು ಟೀ ಎಸ್ಟೇಟ್‌ಗಳಿಗೆ ಹೋಗಲು ಕಾರ್ಮಿಕರು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಈ ಕಾಡುಕೋಣಗಳನ್ನು ಕಾಡಿಗಟ್ಟಲು ಅಥವಾ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು,” ಎಂದು ಮಲೆನಾಡಿನ ಜನತೆ ಆಗ್ರಹಿಸಿದ್ದಾರೆ.

ಸದ್ಯ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಜನತೆ ಕಾಡುಕೋಣಗಳ ಉಪಟಳದಿಂದಾಗಿ ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ. ಅರಣ್ಯ ಇಲಾಖೆ ಈ ಕೂಡಲೇ ಕಾರ್ಯಪ್ರವೃತ್ತವಾಗಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version