ದೆಹಲಿಯಲ್ಲಿ ತೀವ್ರಗೊಂಡ ಸಿಜೆಪಿ ಪ್ರತಿಭಟನೆ: ಉಪವಾಸ ಸತ್ಯಾಗ್ರಹ ಕೈಬಿಟ್ಟ ದೀಪ್ಕೆ, ಜೆ.ಪಿ. ನಡ್ಡಾ ಅವರೊಂದಿಗೆ ನಿಯೋಗದ ಮಾತುಕತೆ

cjp sansat chalo
20/07/2026

ನವದೆಹಲಿ: ನೀಟ್-ಯುಜಿ (NEET-UG) 2026ರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಮತ್ತು ಪರೀಕ್ಷಾ ಸುಧಾರಣೆಗಳಿಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿರುವ ‘ಸಂಸದ್ ಚಲೋ’ ಮೆರವಣಿಗೆಯಿಂದಾಗಿ ದೇಶದ ರಾಜಧಾನಿಯಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ವಿರುದ್ಧದ ಈ ಹೋರಾಟ ತೀವ್ರಗೊಳ್ಳುತ್ತಿದ್ದಂತೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಮನವಿಯ ಮೇರೆಗೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ.

ಮತ್ತೊಂದೆಡೆ, ಸರ್ಕಾರದ ಆಹ್ವಾನದ ಮೇರೆಗೆ ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರ ನಿವಾಸಕ್ಕೆ ತೆರಳಿ ಸುದೀರ್ಘ ಮಾತುಕತೆ ನಡೆಸಿದರು. ಈ ವೇಳೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆ, ಸೋನಮ್ ವಾಂಗ್ಚುಕ್ ಅವರ ಬಿಡುಗಡೆ ಹಾಗೂ ನೀಟ್ ಹಗರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಎಂಬ ಪ್ರಮುಖ ಮೂರು ಬೇಡಿಕೆಗಳನ್ನು ನಿಯೋಗವು ಸರ್ಕಾರದ ಮುಂದಿಟ್ಟಿದೆ. ಆದರೆ ಈ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರದಿಂದ ಯಾವುದೇ ಖಚಿತ ಭರವಸೆ ಸಿಕ್ಕಿಲ್ಲ ಎಂದು ವಕ್ತಾರರು ತಿಳಿಸಿದ್ದು, ಲಿಖಿತ ಮನವಿಯನ್ನು ಸ್ವೀಕರಿಸಿರುವ ಜೆ.ಪಿ. ನಡ್ಡಾ ಅವರು ಪ್ರತಿಭಟನೆಯನ್ನು ಹಿಂತೆಗೆದುಕೊಂಡು ಸಹಕರಿಸುವಂತೆ ಕೋರಿದ್ದಾರೆ.

ಇದೇ ವೇಳೆ ಜಂತರ್ ಮಂತರ್‌ ನಿಂದ ಸಂಸತ್ತಿನ ಕಡೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ದೆಹಲಿ ಪೊಲೀಸರು ಲಘು ಲಾಠಿ ಪ್ರಹಾರ ಮತ್ತು ಕಣ್ಣೀರು ಅನಿಲವನ್ನು ಬಳಸಿದ್ದರಿಂದ ಪರಿಸ್ಥಿತಿ ಕೈಮೀರಿತು. ಪೊಲೀಸರು ಬ್ಯಾರಿಕೇಡ್‌ ಗಳನ್ನು ಹಾಕಿ ತಡೆದಾಗ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಕೆಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ. ಆದರೆ ಪೊಲೀಸರು ಮಹಿಳೆಯರು ಮತ್ತು ಸಣ್ಣ ಮಕ್ಕಳ ಮೇಲೂ ದೌರ್ಜನ್ಯ ಎಸಗಿದ್ದಾರೆ ಎಂದು ಸಿಜೆಪಿ ಗಂಭೀರ ಆರೋಪ ಮಾಡಿದ್ದು, ದೆಹಲಿ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತಾ ಕಾರಣಗಳಿಗಾಗಿ ದೆಹಲಿ ಮೆಟ್ರೋ ರೈಲು ನಿಗಮವು ರಾಜೀವ್ ಚೌಕ್ ಮತ್ತು ಪಟೇಲ್ ಚೌಕ್ ಸೇರಿದಂತೆ ಐದು ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದ ನೂರಾರು ಪ್ರಯಾಣಿಕರು ಮತ್ತು ಕಚೇರಿ ಸಿಬ್ಬಂದಿ ತೀವ್ರ ಪರದಾಡುವಂತಾಯಿತು.

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಈ ವಿಷಯ ಭಾರಿ ಸದ್ದು ಮಾಡಿದ್ದು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಮತ್ತು ಲಾಠಿ ಪ್ರಹಾರವನ್ನು ಸದನದಲ್ಲಿ ತೀವ್ರವಾಗಿ ಖಂಡಿಸಿದರು. ಇತ್ತ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಧರಣಿಗೆ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಅತಿಶಿ ಖುದ್ದಾಗಿ ಆಗಮಿಸಿ ದೇಶದ ಯುವಜನತೆಯ ಹೋರಾಟಕ್ಕೆ ಬೆಂಬಲ ಸೂಚಿಸಿದರು. ದೆಹಲಿ ಮಾತ್ರವಲ್ಲದೆ ಗುಜರಾತ್‌ ನ ಅಹಮದಾಬಾದ್ ಸೇರಿದಂತೆ ಹಲವು ನಗರಗಳಿಗೂ ಈ ಪ್ರತಿಭಟನೆ ವ್ಯಾಪಿಸಿದ್ದು, ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version