ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಭೇಟಿ: ನಡೆದ ಮಾತುಕತೆ ಏನು ಗೊತ್ತಾ?

siddaramaiah st somashekhar
21/08/2023

ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿದ ಎಸ್.ಟಿ.ಸೋಮಶೇಖರ್ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ ತುರ್ತಾಗಿ ಆಗಬೇಕಿರುವ ಕಾಮಗಾರಿಗಳ ಕುರಿತು ಮನವಿ ಸಲ್ಲಿಸಿದರು.

ಕೆಂಗೇರಿ ಹೋಬಳಿಯಲ್ಲಿ ಸಣ್ಣ ಹೆರಿಗೆ ಆಸ್ಪತ್ರೆ ಇದ್ದು ಜನಸಂಖ್ಯೆಗೆ ಅನುಗುಣವಾಗಿ ನೂತನವಾಗಿ ಹೆರಿಗೆ ಆಸ್ಪತ್ರೆ ನಿರ್ಮಿಸಲು ಸರ್ ಎಂ.ವಿಶ್ವೇಶ್ವರಯ್ಯ 2ನೇ ಬ್ಲಾಕ್ ಬಡಾವಣೆಯಲ್ಲಿ ಬಿಡಿಎ ವತಿಯಿಂದ 3432 ಚ.ಮೀ.ನಷ್ಟು ಸಿ.ಎ. ನಿವೇಶನ ಮಂಜೂರಾಗಿದೆ. ಆದರೆ  ಹೆರಿಗೆ ಆಸ್ಪತ್ರೆ ನಿರ್ಮಿಸಲು ಬಿಬಿಎಂಪಿ ಮುಂದಾಗಿಲ್ಲ.

ಹೆರಿಗೆ ಆಸ್ಪತ್ರೆ ಇಲ್ಲದಿರುವುದರಿಂದ ಹೆಣ್ಣುಮಕ್ಕಳು ನಗರದ ಕೇಂದ್ರ ಭಾಗದಲ್ಲಿರುವ ವಾಣಿವಿಲಾಸ ಆಸ್ಪತ್ರೆಗೆ ತೆರಳುವಂತಾಗಿದೆ. ವಾಣಿವಿಲಾಸ ಆಸ್ಪತ್ರೆ ದೂರವಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಒಂದು ಲಕ್ಷ ರೂ.ಗಳವರಗೆ ಬಿಲ್ ಪಾವತಿಸಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಕೆಂಗೇರಿ ಭಾಗದಲ್ಲಿ ತುರ್ತಾಗಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಬಿಬಿಎಂಪಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದ್ದಾರೆ.

ಕೆಂಗೇರಿ ಉಪನಗರದಲ್ಲಿರುವ ಎಲ್ ಸಿ10ರಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಆಗುತ್ತಿರುವುದರಿಂದ ಓವರ್ ಬ್ರಿಡ್ಜ್ ನಿರ್ಮಿಸುವಂತೆ ಮೈಲಸಂದ್ರ ಮತ್ತು ಕೆಂಗೇರಿ ಉಪನಗರದ ನಿವಾಸಿಗಳ ಒತ್ತಾಸೆಯಾಗಿದೆ. ಮೇಲ್ಸೇತುವೆ ನಿರ್ಮಾಣದ ಕುರಿತಂತೆ ಸಮೀಕ್ಷೆ ನಡೆಸಿ ವರದಿ ತಯಾರಿಸಿದ್ದು ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆಯೂ ಮುಖ್ಯಮಂತ್ರಿಗಳಿಗೆ ಎಸ್.ಟಿ.ಸೋಮಶೇಖರ್ ಅವರು ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version