9:05 AM Friday 11 - September 2026

ಮೂರನೇ ಗ್ಯಾರೆಂಟಿ ಯೋಜನೆ ಘೋಷಣೆ ಮಾಡಿದ ಕಾಂಗ್ರೆಸ್!

congress
24/02/2023

ಬೆಂಗಳೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ನೆರವಾಗುವ ಉದ್ದೇಶದಿಂದ ಈಗಾಗಲೇ 2 ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಈಗ ಮೂರನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕಾರ್ಡ್ ಕುಟುಂಬದ ಪ್ರತಿ ಸದಸ್ಯನಿಗೆ 10.ಕೆ.ಜಿ ಅಕ್ಕಿ ನೀಡಲು ತೀರ್ಮಾನಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ನೆರವು ನೀಡುವ ಉದ್ದೇಶದಿಂದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡುವ ಗೃಹಜ್ಯೋತಿ ಯೋಜನೆ ಮೊದಲ ಗ್ಯಾರಂಟಿಯಾಗಿ ಘೋಷಣೆ ಮಾಡಿದ್ದೇವೆ. ಆ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 1500 ರೂ ಉಳಿತಾಯ ಮಾಡಲು ಸಹಕಾರಿಯಾಗುತ್ತಿದ್ದೇವೆ. ಇನ್ನು ಪ್ರತಿ ಮನೆಯ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನವನ್ನು ನೀಡಲು ಗೃಹಲಕ್ಷ್ಮಿ ಎಂಬ ಎರಡನೇ ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ.

ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ನಮ್ಮ ಹಿಂದಿನ ಸರ್ಕಾರದ ಅನ್ನಭಾಗ್ಯ ಯೋಜನೆ ಬಗ್ಗೆ ಜನ ಪ್ರಶಂಸೆ ವ್ಯಕ್ತಿಪಡಿಸಿದ್ದು, ಒಂದು ವೇಳೆ ಕಾಂಗ್ರೆಸ್ ಸರ್ಕಾರ ಈ ಯೋಜನೆ ನೀಡದಿದ್ದರೆ ಕೋವಿಡ್ ಸಮಯದಲ್ಲಿ ನಾವು ಬದುಕು ನಡೆಸುವುದೇ ಕಷ್ಟವಾಗುತ್ತಿತ್ತು ಎಂದು ಹೇಳಿದರು.

ನಮ್ಮ ಸರಕಾರ ನೀಡುತಿದ್ದ 7 ಕೆ.ಜಿ ಅಕ್ಕಿಯನ್ನು ಬಿಜೆಪಿ ಸರ್ಕಾರ 5 ಕೆ.ಜಿಗೆ ಇಳಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಾನು, ನಮ್ಮ ಶಾಸಕಾಂಗ ಪಕ್ಷದ ನಾಯಕರು, ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಇತರ ನಾಯಕರೆಲ್ಲರೂ ಸೇರಿ ಚರ್ಚಿಸಿ  ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಶಕ್ತಿ ತುಂಬಬೇಕು, ಆ ಮೂಲಕ ರಾಜ್ಯವನ್ನು ಹಸಿವು ಮುಕ್ತವನ್ನಾಗಿ ಮಾಡಬೇಕು ಎಂದು ನಮ್ಮ ಮೂರನೇ ಗ್ಯಾರಂಟಿ ಯೋಜನೆಯಾಗಿ 10 ಕೆ.ಜಿ ಅಕ್ಕಿಯನ್ನು ನೀಡಲು ನಿರ್ಧರಿಸಲಾಗಿದೆ.

ಇಂದು ವಿಧಾನಮಂಡಲ ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದು, ಬಿಜೆಪಿಯ ಕೊನೆ ದಿನಗಳು ಸಮೀಪಿಸುತ್ತಿವೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ 2013 ರಲ್ಲಿ ಬಸವ ಜಯಂತಿ ದಿನ ಅಧಿಕಾರ ಸ್ವೀಕಾರ ಮಾಡಿ ರಾಜ್ಯ ಹಾಗೂ ದೇಶಕ್ಕೆ ಸಂದೇಶ ಕೊಟ್ಟಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಲು ಸಾಧ್ಯವಾಗದ ಯೋಜನೆಗಳನ್ನು ಈಗ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೂಲಕ ಮಾಡುತ್ತಿದೆ.

ಮುಖ್ಯಮಂತ್ರಿಗಳು ನಾವುಗಳು ಇಲ್ಲದ ಸಮಯದಲ್ಲಿ ನಿನ್ನೆ ವಿಧಾನಮಂಡಲ ಅಧಿವೇಶನದಲ್ಲಿ ಅರ್ಕಾವತಿ ರಿಡೂ ವಿಚಾರವಾಗಿ ಮಾತನಾಡಿ ಪತ್ರಿಕೆಗಳಲ್ಲಿ ಹೆಡ್ ಲೈನ್ ಬರುವಂತೆ ಮಾಡಿದ್ದಾರೆ. ಅವರು ವಿರೋಧ ಪಕ್ಷದಲ್ಲಿ ಕೂತಿದ್ದಾಗ ಕಡಲೇಪುರಿ ತಿನ್ನುತ್ತಿದ್ದರಾ? ಇನ್ನು ಕಳೆದ ನಾಲ್ಕು ವರ್ಷಗಳಿಂದ ಆಡಳಿತ ಮಾಡಿದರಲ್ಲಾ ಆಗ್ಯಾಕೆ ಅವರು ಸುಮ್ಮನಿದ್ದರು. ಅವರು ಈ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚೆ ಮಾಡಲಿಲ್ಲ ಯಾಕೆ? ಈಗಲೂ ನಾನು ಅವರಿಗೆ ಸವಾಲು ಹಾಕುತ್ತೇನೆ. ಒಂದು ದಿನ ಅದಿವೇಶನ ವಿಸ್ತರಣೆ ಮಾಡಲಿ, ಈ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಲಿ. ನಾವು ಎಐಸಿಸಿ ಅಧಿವೇಶನಕ್ಕೆ ಹೋಗದಿದ್ದರೂ ಪರ್ವಾಗಿಲ್ಲ, ನಾವು ಈ ವಿಚಾರವಾಗಿ ಚರ್ಚೆ ಮಾಡಲು ಸಿದ್ಧವಿದ್ದೇವೆ.

ಇನ್ನು ಕೇಂದ್ರ ಸರ್ಕಾರ ಎನ್ಇಪಿಯಲ್ಲಿ 1 ನೇ ತರಗತಿ ಸೇರಲು ಮಕ್ಕಳಿಗೆ 6 ವರ್ಷ ವಯೋಮಿತಿ ನಿಗದಿ ಮಾಡಿರುವುದರಿಂದ ಅನೇಕ ಮಕ್ಕಳಿಗೆ ತೊಂದರೆಯಾಗಿದೆ. ನಾವು ಕೂಡ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಈಗಿರುವ ಪದ್ಧತಿಯಲ್ಲಿ ಯಾವ ಲೋಪವಿದೆ? ಶಿಕ್ಷಣ ಎಂಬುದು ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಕೇಂದ್ರ ಇದರಲ್ಲಿ ಹಸ್ತಕ್ಷೇಪ ಮಾಡಬಾರದು. ನಾವು ಅಧಿಕಾರಕ್ಕೆ ಬಂದರೆ ಎನ್ಇಪಿ ಜಾರಿಗೆ ಅವಕಾಶ ನೀಡವುದಿಲ್ಲ. ನಮ್ಮ ರಾಜ್ಯ ಜ್ಞಾನದ ರಾಜಧಾನಿಯಾಗಿದ್ದು, ದೇಶದಲ್ಲಿ ಇಂಜಿನಿಯರ್, ಡಾಕ್ಟರ್ ಹಾಗೂ ನರ್ಸ್ ಗಳು ರಾಜ್ಯದಿಂದಲೇ ಹೆಚ್ಚು ತಯಾರಾಗಿದ್ದಾರೆ. ಹೀಗೆ ನಮ್ಮ ರಾಜ್ಯ ಶಿಕ್ಷಣದ ಎಲ್ಲ ಹಂತದಲ್ಲೂ ದೇಶಕ್ಕೆ ಮಾದರಿಯಾಗಿದೆ.

ಗ್ಯಾರಂಟಿ ಯೋಜನೆಗಳಿಗೆ  ಎಲ್ಲಿಂದ ದುಡ್ಡು ತರುತ್ತಾರೆ ಎಂಬ ಬಿಜೆಪಿ ನಾಯಕರ ಪ್ರಶ್ನೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ ‘ನೀವು ಅವರ ಪ್ರಣಾಳಿಕೆ ತೆಗೆದು ನೋಡಿ. ರೈತರಿಗೆ 1 ಲಕ್ಷ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದ್ದರು. 7 ರಿಂದ 10  ಗಂಟೆಗೆ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದ್ದರು. ಡಬಲ್ ಇಂಜಿನ್ ಸರ್ಕಾರದಲ್ಲಿ ಇದು ಸಾಧ್ಯವಾಗಲಿಲ್ಲ. ಇನ್ನು ರಾಜ್ಯಪಾಲರ ಭಾಷಣದಲ್ಲಿ ಅವರು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಹೆಚ್ಚುವರಿ ವಿದ್ಯುತ್ ಅನ್ನು ಬೇರೆ ರಾಜ್ಯಕ್ಕೆ ಮಾರಿ 4 ಸಾವಿರ ಕೋಟಿ ಲಾಭ ಮಾಡಿದ್ದೇವೆ ಎಂದು ಹೇಳಿದ್ದಾರೆ. ದೇಶದ ಇಂಧನ ಉತ್ಪಾದನೆ ಇತಿಹಾಸದಲ್ಲೇ ರಾಜ್ಯವೊಂದು ಹೆಚ್ಚುವರಿ ವಿದ್ಯುತ್ ಮಾರಾಟ ಮಾಡುತ್ತಿರುವುದು ಇದೇ ಮೊದಲು. ನಾವು ಮಾಡಿದ್ದನ್ನು ಅವರು ರೈತರಿಗೆ ನೀಡಲು ಆಗುತ್ತಿಲ್ಲ.ಇನ್ನು ಎಲ್ಲಿಂದ ತರುತ್ತೀರಿ ಎಂದರೆ, ನಾವು ಇಂಧನ ಸರಬರಾಜಿನಲ್ಲಿ ಆಗುವ ನಷ್ಟ ತಡೆಯಲು ಪ್ರತಿ ತಾಲೂಕಿನಲ್ಲಿ 20-40 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡಲು ವ್ಯವಸ್ಥೆ ಕಲ್ಪಿಸಿದ್ದೇವೆ. ನಾವು ಈ ರಾಜ್ಯವನ್ನು ಬಲಪಡಿಸಿದ್ದೇವೆ. ನಮ್ಮ ಯೋಜನೆ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ. ಅವರು 600 ಭರವಸೆಗಳಲ್ಲಿ 50 ಮಾತ್ರ ಈಡೇರಿಸಿದ್ದಾರೆ. ಇನ್ನು ನಮ್ಮ ಸರ್ಕಾರ ಮನೆಯೊಡತಿಗೆ 2000 ರೂ. ನೀಡುವುದಾಗಿ ಘೋಷಿಸಿದೆ. ಈ ಸರ್ಕಾರ ಮೊದಲು 500 ರೂ. ನೀಡುವುದಾಗಿ ಘೋಷಿಸಿ ಈಗ 1000 ರೂ. ನೀಡಲು ತೀರ್ಮಾನಿಸಿದೆ. ಇದು ಮಾತ್ರ ಹೇಗೆ ಸಾಧ್ಯವಾಗುತ್ತದೆ? ಜ.16 ರಂದು ಪತ್ರಿಕೆಗಳಲ್ಲಿ ಬಿಜೆಪಿ ಸರ್ಕಾರ ಗೃಹಿಣಿ ಶಕ್ತಿ ಯೋಜನೆ ಮೂಲಕ ಆರ್ಥಿಕ ನೆರವು ನೀಡುವುದಾಗಿ ಹೇಗೆ ಜಾಹೀರಾತು ನೀಡಿದರು? ಯಾವ ಆಧಾರದ ಮೇಲೆ ಹೇಳಿದರು? ಜನರ ಕಿವಿ ಮೇಲೆ ಕಿವಿ ಹೂವ ಇಡಲು ಘೋಷಣೆ ಮಾಡಿದ್ದಾರಾ? ಬಿಜೆಪಿ ಸರ್ಕಾರ ನುಡಿದಂತೆ ನಡೆಯಲಿಲ್ಲ. ಕಳೆದ ಮೂರು ವರ್ಷಗಳ ಬಜೆಟ್ ಅನ್ನು ಅವರು ಹೇಗೆ ಜಾರಿ ಮಾಡಿದ್ದಾರೆ. ಒಂದು ಸರ್ಕಾರವಾಗಿ ದೇವಸ್ಥಾನ ಕಟ್ಟುತ್ತೇವೆ ಎಂದರೆ ಹೇಗೆ. ದೇವಸ್ಥಾನ ಕಟ್ಟಲು, ಧರ್ಮ ಉಳಿಸಲು ಸಂಘ ಸಂಸ್ಥೆಗಳಿವೆ. ಅಯೋಧ್ಯೆಯಲ್ಲಿ ರಾಮನ ದೇವಾಲಯವನ್ನು ಸರ್ಕಾರ ನಿರ್ಮಾಣ ಮಾಡುತ್ತಿದೆಯೇ? ಇವರು ಭಾವನೆ ಮೂಲಕ ಆಡಳಿತ ಮಾಡುತ್ತಾರ? ನಮ್ಮ ಸರ್ಕಾರ ಬದುಕಿನ ಆಧಾರದ ಮೇಲೆ ಆಡಳಿತ ಮಾಡುತ್ತದೆ. ಈ ವಿಚಾರದಲ್ಲಿ ನಾನು ಆಯನೂರು ಮಂಜುನಾಥ್ ಅವರನ್ನು ಪ್ರಶಂಶಿಸುತ್ತೇನೆ. ಅವರು ಸತ್ಯಾಂಶ ಒಪ್ಪಿಕೊಂಡಿದ್ದಾರೆ. ಅಮಿತ್ ಶಾ ಅವರು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಆದರೆ ಈ ಮಾತನ್ನು ಹೇಳುವ ಮೂಲಕ ರಾಜ್ಯದಲ್ಲಿ ಭ್ರಷ್ಟಾಚಾರ ಇದೆ ಎಂಬ ನಮ್ಮ ಆರೋಪಕ್ಕೆ ಅವರು ಅಂಕಿತ ಹಾಕಿದ್ದಾರೆ. ಇದಕ್ಕಾಗಿ ನಾವು ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನಡುವೆ ಜಗಳವಾಗುತ್ತಿದೆ, ಕಾಂಗ್ರೆಸ್ ಗೆ ಮತ ಹಾಕಿದರೆ ಹೈಕಮಾಂಡ್ ಗೆ ಎಟಿಎಂ ಕೊಟ್ಟಂತೆ ಎಂಬ ಅಮಿತ್ ಶಾ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, ‘ನಾನು ಸಿದ್ದರಾಮಯ್ಯ ಕೈಕೈ ಮಿಲಾಯಿಸಿ ಜಗಳವಾಡಲು ಕುಸ್ತಿ ಅಖಾಡದಲ್ಲಿ ಇದ್ದೇವಾ? ಜಗಳ, ಕುಸ್ತಿಗಳು ಏನಿದ್ದರೂ ಬಿಜೆಪಿಯಲ್ಲಿದೆ. ಯುದ್ಧ, ಹೇಳಿಕೆ ಸಮರ ನಡೆಯುತ್ತಿರುವುದು ಬಿಜೆಪಿ ಪಕ್ಷದಲ್ಲಿ. ಅವರು ಯಡಿಯೂರಪ್ಪನವರ ಕಣ್ಣಲ್ಲಿ ನೀರು ಹಾಕಿಸಿದ್ದು ಯಾಕೆ? ನಿರಾಣಿ ವಿಚಾರವಾಗಿ ಯತ್ನಾಳ್ ಏನು ಹೇಳಿದರು? ಸರ್ಕಾರದ ಬಗ್ಗೆ ವಿಶ್ವನಾಥ್, ಗೂಳಿಹಟ್ಟಿ ಶೇಖರ್ ಏನು ಹೇಳಿದ್ದಾರೆ? ವಿಧಾನಸೌಧ ಕಾರಿಡಾರ್ ನಲ್ಲಿ ಬಿಜೆಪಿ ಶಾಸಕರು ಏನು ಮಾತನಾಡುತ್ತಿದ್ದಾರೆ? ಯೋಗೇಶ್ವರ್ ಏನು ಹೇಳಿದ್ದಾರೆ? ಮಂಚದ ಮೇಲಿದ್ದ ಮಂತ್ರಿ ಯಾರು ಭ್ರಷ್ಟ ಎಂದು ಹೇಳಿದ? ಎಂಟಿಬಿ ನಾಗರಾಜ್ ಅವರು ಏನು ಹೇಳಿದರು? ಮಾಧ್ಯಮಗಳಲ್ಲಿ ಯಾರ ಸರ್ಕಾರದ ರೇಟ್ ಕಾರ್ಡ್ ಪ್ರಕಟವಾಯಿತು? ಇದು ಸುಳ್ಳಾಗಿದ್ದರೆ ಅದನ್ನು ಸಾಬೀತು ಮಾಡಿ ಅವರ ವಿರುದ್ಧ ಕೇಸ್ ಯಾಕೆ ಹಾಕಿಲ್ಲ? ಇವರಿಗೆ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುವ ಆಸಕ್ತಿ ಇದ್ದರೆ ಅಧಿವೇಶನ ವಿಸ್ತರಣೆ ಮಾಡಿ, ಚರ್ಚೆಗೆ ಅವಕಾಶ ನೀಡಲಿ’ ಎಂದು ತಿರುಗೇಟು ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version