ಬಿಎಸ್ ಪಿ ಮುಸ್ಲಿಂ ಸಂಸದನನ್ನು ‘ಮುಲ್ಲಾ, ಭಯೋತ್ಪಾದಕ’ ಎಂದ ಬಿಜೆಪಿ ಸಂಸದ ರಮೇಶ್ ಬಿಧುರಿ: ಕಾನೂನು ಕ್ರಮಕ್ಕೆ ಸಂಸದ ಡ್ಯಾನಿಶ್ ಅಲಿ ಆಗ್ರಹ

23/09/2023

ಬಿಜೆಪಿ ಸಂಸದ ರಮೇಶ್ ಬಿಧುರಿ ಲೋಕಸಭೆಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಲೋಕಸಭಾ ಸದಸ್ಯತ್ವ ತ್ಯಜಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಹೇಳಿಕೆ ನೀಡಿದ್ದಾರೆ.

‘ದ್ವೇಷ ಭಾಷಣಗಳನ್ನು ಕೇಳಲು ಜನ ನನ್ನನ್ನು ಆಯ್ಕೆ ಮಾಡಿಲ್ಲ. ಇದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಸಂಬಂಧ ನಾನು ಸ್ಪೀಕರ್‌ಗೆ ಪತ್ರ ಬರೆದಿದ್ದೇನೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.
‘ಇದು ದ್ವೇಷದ ಭಾಷಣಕ್ಕಿಂತ ಕಡಿಮೆ ಇಲ್ಲ. ಇದು ಸದನದಲ್ಲಿ ನಡೆದ ದ್ವೇಷದ ಭಾಷಣವಾಗಿದೆ. ಇಷ್ಟು ದಿನ ಸಂಸತ್ತಿನ ಹೊರಗೆ ದ್ವೇಷ ಭಾಷಣಗಳನ್ನು ಮಾಡಲಾಗುತ್ತಿತ್ತು. ಆದರೆ ಈಗ ಬಿಜೆಪಿ ಸಂಸದ ಸದನದೊಳಗೇ ದ್ವೇಷ ಭಾಷಣ ಮಾಡಿದ್ದಾರೆ’ ಎಂದು ಡ್ಯಾನಿಶ್ ಅಲಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಧುರಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನೀವು ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅಲಿ, ‘ಸ್ಪೀಕರ್ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಆದರೆ ಕ್ರಮ ಕೈಗೊಳ್ಳದಿದ್ದರೆ, ಭಾರವಾದ ಹೃದಯದಿಂದ ನನ್ನ ಲೋಕಸಭಾ ಸದಸ್ಯತ್ವ ತ್ಯಜಿಸುವ ಬಗ್ಗೆ ಯೋಚಿಸುತ್ತೇನೆ. ಏಕೆಂದರೆ ದ್ವೇಷ ಭಾಷಣಗಳನ್ನು ಕೇಳಲು ಜನ ನನ್ನನ್ನು ಸಂಸತ್ತಿಗೆ ಕಳುಹಿಸಿಲ್ಲ ಎಂದಿದ್ದಾರೆ.

ಭಾರತದ ಚಂದ್ರಯಾನ-3 ರ ಯಶಸ್ಸಿನ ಚರ್ಚೆಯ ವೇಳೆ ಮಾತನಾಡಿದ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಡ್ಯಾನಿಶ್ ಅಲಿ ಅವರನ್ನು ಭಯೋತ್ಪಾದಕ, ಉಗ್ರಗಾಮಿ ಮತ್ತು ಪಿಂಪ್ ಎಂದು ನಿಂದಿಸಿದ್ದರು. ಈ ‘ಮುಲ್ಲಾ’ ನನ್ನು ಹೊರಹಾಕಿ. “ಈ ಮುಲ್ಲಾ ಒಬ್ಬ ಭಯೋತ್ಪಾದಕ” ಎಂದು ಬಿಧುರಿ ಅವಮಾನಕಾರಿಯಾಗಿ ಮಾತನಾಡಿದ್ದರು.

ಇತ್ತೀಚಿನ ಸುದ್ದಿ

Exit mobile version