ಮಂಗಳೂರು: ವ್ಯಕ್ತಿಗೆ ಆನ್ ಲೈನ್ ವಂಚನೆ, ಚಿನ್ನಾಭರಣವಿದ್ದ ಬ್ಯಾಗ್ ಕಳವು, ಕಾರಿನಲ್ಲಿ ಮಾರಕಾಸ್ತ್ರ ಪತ್ತೆ
ಕ್ರೆಡಿಟ್ ಕಾರ್ಡ್ ಬೋನಸ್ ಆಮಿಷ: ವ್ಯಕ್ತಿಗೆ 3.32 ಲಕ್ಷ ರೂ. ಆನ್ ಲೈನ್ ವಂಚನೆ
ಮಂಗಳೂರು: ಕ್ರೆಡಿಟ್ ಕಾರ್ಡ್ ಬೋನಸ್ ಬಂದಿರುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ವಿವಿಧ ಬ್ಯಾಂಕ್ ಖಾತೆಗಳಿಂದ ಲಕ್ಷಾಂತರ ರೂಪಾಯಿ ಹಣವನ್ನು ದೋಚಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ವಂಚಕರು ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ, ಬೋನಸ್ ಆಸೆ ತೋರಿಸಿ ನಂಬಿಸಿದ್ದಾರೆ. ಇದನ್ನು ನಂಬಿದ ದೂರುದಾರರು ತಮ್ಮ ವಿವಿಧ ಖಾತೆಗಳಲ್ಲಿದ್ದ ಒಟ್ಟು 3,32,247 ರೂ. ಹಣವನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್ ಆರ್ ಟಿಸಿ ಬಸ್ನಲ್ಲಿ ಚಿನ್ನಾಭರಣವಿದ್ದ ಬ್ಯಾಗ್ ಕಳವು: 4.8 ಲಕ್ಷ ರೂ. ಮೌಲ್ಯದ ಸೊತ್ತು ನಷ್ಟ
ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಚಿನ್ನಾಭರಣ ಹಾಗೂ ನಗದು ಇದ್ದ ಬ್ಯಾಗ್ ಕಳವಾಗಿರುವ ಘಟನೆ ವರದಿಯಾಗಿದೆ. ಪದ್ಮಜಾ ಎಂಬವರು ಜನವರಿ 23ರಂದು ರಾತ್ರಿ ಮಂಗಳೂರು ಬಸ್ ನಿಲ್ದಾಣದಲ್ಲಿ ಬಸ್ಸಿನ ಕ್ಯಾಬಿನ್ನಲ್ಲಿ ತಮ್ಮ ಬ್ಯಾಗ್ ಇಟ್ಟಿದ್ದರು. ಬಸ್ ಹೊರಟ ಸ್ವಲ್ಪ ದೂರದಲ್ಲೇ ಬ್ಯಾಗ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಬ್ಯಾಗ್ನಲ್ಲಿ 45 ಗ್ರಾಂ ಚಿನ್ನಾಭರಣ, 20 ಸಾವಿರ ರೂ. ನಗದು ಸೇರಿದಂತೆ ಒಟ್ಟು 4.80 ಲಕ್ಷ ರೂ. ಮೌಲ್ಯದ ಸೊತ್ತುಗಳಿದ್ದವು ಎಂದು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಮುಡಿಪು ಚೆಕ್ ಪೋಸ್ಟ್ ಬಳಿ ಕಾರಿನಲ್ಲಿ ಮಾರಕಾಸ್ತ್ರ ಪತ್ತೆ: ಪ್ರಕರಣ ದಾಖಲು
ಮಂಗಳೂರು: ಮುಡಿಪು ಚೆಕ್ ಪೋಸ್ಟ್ ಬಳಿ ಕಾರಿನಲ್ಲಿ ಅಕ್ರಮವಾಗಿ ಮಾರಕಾಸ್ತ್ರ ಸಾಗಿಸುತ್ತಿದ್ದ ವ್ಯಕ್ತಿಯನ್ನು ಕೊಣಾಜೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಶನಿವಾರ ತಡರಾತ್ರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ, ಕಾರೊಂದರ ಡಿಕ್ಕಿಯಲ್ಲಿ ಎರಡು ಅಡಿ ಉದ್ದದ ಮಚ್ಚು ಪತ್ತೆಯಾಗಿದೆ. ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಈ ಮಾರಕಾಸ್ತ್ರವನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ಶಂಕಿಸಲಾಗಿದ್ದು, ಪೊಲೀಸರು ಕಾರು ಮತ್ತು ಮಚ್ಚನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























