12:12 PM Wednesday 27 - August 2025

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಾಗಿ ಸ್ವಾಧೀನಗೊಂಡ ಭೂಮಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಳಂಬ: ಆ. 22ರಂದು ಪ್ರತಿಭಟನೆಗೆ ನಿರ್ಧಾರ

manglore
18/08/2023

ಮಂಗಳೂರಿನ ನಂತೂರಿನಿಂದ ಮೂಡಬಿದ್ರೆವರೆಗೆ ರಾಷ್ಟ್ರೀಯ ಹೆದ್ದಾರಿಗಾಗಿ ಸ್ವಾಧೀನಗೊಂಡ ಭೂಮಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಎನ್ ಎಚ್169 ಭೂ ಮಾಲಕರ ಹೋರಾಟ ಸಮಿತಿ ಆ. 22ರಂದು ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆಗೆ ನಿರ್ಧರಿಸಿದೆ.

ಈ ಕುರಿತು ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್, 2016ರಿಂದ ನಮ್ಮ ಭೂಮಿ ಸರಕಾರದ ಕೈಯ್ಯಲ್ಲಿದೆ. 2020ರಿಂದ ಭೂ ಪರಿಹಾರ ನೀಡುವ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಇನ್ನೂ ಪರಿಹಾರ ದೊರಕಿಲ್ಲ. ಅದಕ್ಕಾಗಿ 20 ಗ್ರಾಮಗಳ ಭೂಮಾಲಕರು ಪ್ರತಿಭಟನೆಗೆ ನಿರ್ಧರಿಸಿದ್ದಾರೆ ಎಂದು ಹೇಳಿದರು.

ಭೂ ಪರಿಹಾರವಾಗಿ 2016ರಲ್ಲಿ ನಿಗದಿಪಡಿಸಲಾಗಿದ್ದ 485 ಕೋಟಿ ರೂ. ಪರಿಹಾರ ಪ್ರಕ್ರಿಯೆ ವಿಳಂಬಗೊಂಡ ಹಿನ್ನೆಲೆಯಲ್ಲಿ 2020ರ ದರ ನಿಗದಿಯೊಂದಿಗೆ 1073 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಸುಮಾರು ಆರು ತಿಂಗಳ ಹಿಂದೆ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ಈ ಪರಿಹಾರಕ್ಕಾಗಿನ ಕಡತ ಕೇಂದ್ರದ ಸಾರಿಗೆ ಸಚಿವಾಲಯದಲ್ಲಿದೆ ಎಂದು ಹೇಳಿಕೆ ನೀಡಿದ್ದರು.

ಆದರೆ, ಕೆಲ ದಿನಗಳ ಹಿಂದೆ ಈ ಬಗ್ಗೆ ವಿಚಾರಿಸಿದಾಗ ಆ ಕಡತ ಬೆಂಗಳೂರಿನ ಎನ್ ಎಚ್ ಕಚೇರಿಯಿಂದ ದಿಲ್ಲಿಯ ಎನ್ ಎಚ್ ಕಚೇರಿವರೆಗೆ ಮಾತ್ರ ಸಾಗಿದೆ. ದರದಲ್ಲಿ ಆಗಿರುವ ವ್ಯತ್ಯಾಸಕ್ಕೆ ಸಂಬಂಧಿಸಿ ಅಲ್ಲಿಂದ ಬರುವ ಪ್ರಶ್ನೆಗಳಿಗೆ ಉತ್ತರ ನೀಡುವುದರಲ್ಲೇ ವಿಳಂಬವನ್ನು ಮಾಡಲಾಗುತ್ತಿದೆ. ಕಳೆದ ಮಾರ್ಚ್ ನಲ್ಲಿ ಪ್ರಾದೇಶಿಕ ಅಧಿಕಾರಿಯ ಸಭೆ ನಡೆಸಿ ಒಂದು ತಿಂಗಳ ಒಳಗೆ ತೀರ್ಮಾನ ಮಾಡುವ ಭರವಸೆ ನೀಡಲಾಗಿತ್ತು. ಆದರೆ ನಾಲ್ಕು ತಿಂಗಳಾದರೂ ಪರಿಹಾರ ದೊರಕಿಲ್ಲ ಎಂದು ಅವರು ಆರೋಪಿಸಿದರು.

ಇತ್ತೀಚಿನ ಸುದ್ದಿ

Exit mobile version