ಸಹೋದರಿಯ ಮದುವೆಗೆ ಖರೀದಿಸಿದ್ದ ಚಿನ್ನಾಭರಣಗಳನ್ನು ಕದ್ದ ದೆಹಲಿ ಮಹಿಳೆ: ಈಕೆಯ ಖತರ್ನಾಕ್ ಪ್ಲ್ಯಾನ್ ನೋಡಿ ದಂಗಾದ ಪೊಲೀಸರು..!

ಬುರ್ಖಾ ಧರಿಸಿ ಬಂದ 31 ವರ್ಷದ ಮಹಿಳೆಯು ತನ್ನ ತಾಯಿಯ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಆಭರಣಗಳು ಮತ್ತು ಹಣವನ್ನು ಕದ್ದ ಘಟನೆ ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಮಲೇಶ್ ಎಂಬ ಮಹಿಳೆಯು ದೆಹಲಿಯ ಉತ್ತಮ್ ನಗರದಲ್ಲಿರುವ ತನ್ನ ಸೇವಕ್ ಪಾರ್ಕ್ ಮನೆಯಲ್ಲಿ ಕಳ್ಳತನ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ದೂರಿನಲ್ಲಿ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು 25,000 ರೂಪಾಯಿ ನಗದು ಕಳವು ಮಾಡಲಾಗಿದೆ ಎಂದು ಕಮಲೇಶ್ ತನ್ನ ದೂರಿನಲ್ಲಿ ತಿಳಿಸಿದ್ದರು.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದರು. ಆದರೆ ಬಲವಂತದ ಪ್ರವೇಶದ ಯಾವುದೇ ಚಿಹ್ನೆಗಳು ಕಂಡು ಬಾರಲಿಲ್ಲ. ಮುಖ್ಯ ಬಾಗಿಲಿನ ಬೀಗಗಳು ಮತ್ತು ಕಬೋರ್ಡ್ ಹಾಗೇ ಇರುವುದು ಕಂಡುಬಂದಿತ್ತು.
ನಂತರ ತಂಡವು ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿತ್ತು. ಇದೇ ವೇಳೆ ಬುರ್ಖಾ ಧರಿಸಿದ ಮಹಿಳೆ ಅನುಮಾನಾಸ್ಪದವಾಗಿ ಮನೆಗೆ ಪ್ರವೇಶಿಸುತ್ತಿರುವುದನ್ನು ಗುರುತಿಸಿತು. ಪೊಲೀಸರ ತಾಂತ್ರಿಕ ತನಿಖೆಯು ಕಮಲೇಶ್ ಅವರ ಹಿರಿಯ ಮಗಳು ಶ್ವೇತಾ (31) ಅವರನ್ನು ಬಂಧಿಸಲು ಕಾರಣವಾಯಿತು.
ತನ್ನ ತಾಯಿ ತನ್ನ ತಂಗಿಯನ್ನು ಹೆಚ್ಚು ಪ್ರೀತಿಸುತ್ತಿದ್ದರಿಂದ ಈ ಕಳ್ಳತನವನ್ನು ಮಾಡಿದ್ದಾಗಿ ಆರೋಪಿಯು ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸೂಯೆ ಮತ್ತು ದ್ವೇಷದ ಭಾವನೆಗಳು ಅವಳನ್ನು ಆವರಿಸಿದ್ದವು. ಅವಳು ಸ್ವಲ್ಪ ಸಾಲವನ್ನು ಸಹ ಹೊಂದಿದ್ದಳು. ಹೀಗಾಗಿ ಈ ರೀತಿ ಕಳ್ಳತನ ಮಾಡಿದೆ ಎಂದು ಅವಳು ತನಿಖೆ ವೇಳೆ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.