ಟೋಲ್ ಬೂತ್ ಗೆ ಡಿಕ್ಕಿ ಹೊಡೆದ ಬಸ್, ಇಬ್ಬರಿಗೆ ಗಂಭೀರ ಗಾಯ: ರಕ್ಷಣೆ ನೆಪದಲ್ಲಿ ಬಂದು ಮೊಬೈಲ್ ಕದ್ದ ಪಾಪಿಗಳು!
ದೇವನಹಳ್ಳಿ: ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ದೇವನಹಳ್ಳಿ ಹೊರವಲಯದ ಟೋಲ್ ಪ್ಲಾಜಾ ಬಳಿ ಇಂದು ಬೆಳಗಿನ ಜಾವ ಭೀಕರ ಬಸ್ ಅಪಘಾತ ಸಂಭವಿಸಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಟ್ರಾನ್ಸ್ ಇಂಡಿಯಾ ಸಂಸ್ಥೆಯ ಸ್ಲೀಪರ್ ಕೋಚ್ ಬಸ್, ಅತಿ ವೇಗವಾಗಿ ಬಂದು ನಿಯಂತ್ರಣ ತಪ್ಪಿ ಟೋಲ್ ಬೂತ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಹಳೆಯ ಟೋಲ್ ಬೂತ್ ಧ್ವಂಸವಾಗಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ಟೋಲ್ ಬೂತ್ ಕಾರ್ಯನಿರ್ವಹಿಸುತ್ತಿಲ್ಲದ ಕಾರಣ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಘಟನೆಯಲ್ಲಿ ಬಸ್ ಚಾಲಕ ಮತ್ತು ಸಹ-ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
- ಮೊಬೈಲ್ ಕಳವು: ಅಪಘಾತ ನಡೆದ ಕೂಡಲೇ ಸಹಾಯ ಮಾಡುವ ಸೋಗಿನಲ್ಲಿ ಬಂದ ಕೆಲವರು ಮೂವರು ಪ್ರಯಾಣಿಕರ ಐಫೋನ್ ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಇದು ಅತ್ಯಂತ ಅಮಾನವೀಯ ಘಟನೆಯಾಗಿದೆ.
- ಅಪಘಾತಕ್ಕೆ ಕಾರಣ ಏನು?: ಒಂದೇ ರಸ್ತೆಯಲ್ಲಿ ಅಲ್ಪ ದೂರದಲ್ಲಿ ಎರಡು ಟೋಲ್ ಬೂತ್ ಗಳಿರುವುದು ಮತ್ತು ಹಳೆಯ ಬೂತ್‌ಗಳನ್ನು ತೆರವುಗೊಳಿಸದಿರುವುದೇ ಇಂತಹ ಅಪಘಾತಗಳಿಗೆ ಕಾರಣ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























