ಮೃತದೇಹಗಳೇ ಸಾಕ್ಷಿ ಹೇಳಲಿವೆ: ಧರ್ಮಸ್ಥಳ ಪ್ರಕರಣ ಜನರೇ ವಿಪಕ್ಷವಾದ ಅಪರೂಪದ ಘಟನೆ!

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ನೂರಾರು ಜನರ ಹತ್ಯೆ, ಅತೀ ದೊಡ್ಡ ಅಪರಾಧ ಪ್ರಕರಣದ ತನಿಖೆ ಇದೀಗ ಎಸ್ ಐಟಿ ಆರಂಭಿಸಿದೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಇಲ್ಲಿ ಸಾರ್ವಜನಿಕರೇ ವಿಪಕ್ಷದಂತೆ ಪ್ರತಿಭಟಿಸಿ, ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡು ದೊಡ್ಡ ಸಂಚಲನ ಸೃಷ್ಟಿಸಿದರು. ರಾಜ್ಯದಲ್ಲಿ ವಿಪಕ್ಷ ಬಿಜೆಪಿ ನಿಷ್ಕ್ರಿಯ ಸ್ಥಿತಿಯಲ್ಲಿದ್ದು, ಧರ್ಮಸ್ಥಳ ಪ್ರಕರಣದಲ್ಲಿ ನ್ಯಾಯ ಕೇಳುತ್ತಿರುವವರನ್ನೇ ಟಾರ್ಗೆಟ್ ಮಾಡಿ ಕೆಲವು ವಿಪಕ್ಷ ನಾಯಕರು ಹೇಳಿಕೆ ನೀಡಿರುವುದರ ನಡುವೆಯೇ, ಜನರೇ ವಿಪಕ್ಷದ ಸ್ಥಾನದಲ್ಲಿ ನಿಂತು ರಾಜ್ಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಬಡಿದೆಚ್ಚರಿಸಿರುವುದು ವಿಶೇಷವಾಗಿತ್ತು.
ವ್ಯಕ್ತಿಯೊಬ್ಬ ಧರ್ಮಸ್ಥಳದಲ್ಲಿ ಹತ್ಯೆ ಮಾಡಿ ನೂರಾರು ಜನರನ್ನು ಹೂತು ಹಾಕಲಾಗಿದೆ, ತನ್ನನ್ನು ಬೆದರಿಸಿ ಹೂತುಹಾಕಿಸಲಾಯಿತು. ನನಗೆ ಸೂಕ್ತ ಭದ್ರತೆ ನೀಡಿದರೆ ಅದನ್ನು ಹೊರ ತೆಗೆಯುವುದಾಗಿ ತಿಳಿಸಿದ್ದ. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಎಸ್ ಪಿ ಕಚೇರಿ ಹಾಗೂ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಲಾಯಿತು. ಆದ್ರೆ ದೂರು ನೀಡಿದ ನಂತರ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಎಸ್ ಐಟಿ ತನಿಖೆಗೆ ಆದೇಶ ನೀಡಿತು. ಇದರ ಬೆನ್ನಲ್ಲೇ, ನ್ಯಾಯಕ್ಕಾಗಿ ಧ್ವನಿಯೆತ್ತುತ್ತಿರುವವರ ವಿರುದ್ಧ ಕೆಲವರು, ದೇವಾಲಯದ ಧಕ್ಕೆ ತರಲಾಗುತ್ತಿದೆ, ಧಾರ್ಮಿಕ ನಂಬಿಕೆಗೆ ಘಾಸಿ ಮಾಡಲಾಗುತ್ತಿದೆ ಎಂದು ಸುಖಾ ಸುಮ್ಮನೆ ವಿವಾದಗಳನ್ನ ಸೃಷ್ಟಿಸಿದರು. ಅನನ್ಯಾ ಭಟ್ ಎಂಬ ವಿದ್ಯಾರ್ಥಿನಿಯೊಬ್ಬಳು ಮಿಸ್ಸಿಂಗ್ ಆಗಿರುವ ಘಟನೆಯ ಬಗ್ಗೆ ತಾಯಿ ಸುಜಾತಾ ಭಟ್ ದೂರು ನೀಡಿದ್ದರು. ಆದರೆ ಸುಜಾತಾ ಭಟ್ ಬಗ್ಗೆ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡಿದರು. ಧರ್ಮಸ್ಥಳ ಪ್ರಕರಣದಲ್ಲಿ ಹಿಂದುತ್ವ ಸಂಘಟನೆಗಳು, ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು, ಶಾಸಕರು, ಎಂಪಿಗಳು ಮೌನ ವಹಿಸಿದಾಗ ಎಸ್ ಡಿಪಿಐ, ಕಮ್ಯುನಿಸ್ಟ್ ಪಕ್ಷ, ಪ್ರಗತಿಪರರು ಮಾತನಾಡಿದರು. ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯಕೊಡಿಸಬೇಕು ಎಂದು ಒತ್ತಾಯಿಸಿದವರ ಮೇಲೆ ಅಪನಂಬಿಕೆ ಸೃಷ್ಟಿಸಲು ಯತ್ನಿಸಲಾಯಿತು. ಸೌಜನ್ಯ ಪ್ರಕರಣ ಸೇರಿದಂತೆ, ಧರ್ಮಸ್ಥಳದ ಹಲವು ಪ್ರಕರಣಗಳ ಬಗ್ಗೆ ವಿಡಿಯೋ ಮಾಡಿದ್ದ ಎಂ.ಡಿ.ಸಮೀರ್ ಎಂಬ ಯುವಕನ ಧರ್ಮವನ್ನು ತೋರಿಸಿ, ಬೇಧಭಾವ ಸೃಷ್ಟಿಸಲು ಯತ್ನಿಸಿದರು. ಈ ಪ್ರಕರಣದಲ್ಲಿ ಮೊದಲಿನಿಂದಲೂ ನಿರಂತರವಾಗಿ ಹೋರಾಟ ಮಾಡಿದ ಗಿರೀಶ್ ಮಟ್ಟಣ, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಅಪಪ್ರಚಾರ, ಅಪಹಾಸ್ಯ ಮಾಡಿದರು ಆದರೆ ಇದ್ಯಾವುದೂ ನಡೆಯಲಿಲ್ಲ. ಈಗಲೂ ಜನರು ಧರ್ಮಸ್ಥಳದಲ್ಲಿ ಏನಾಗಿದೆ ಎನ್ನುವುದು ಬಹಿರಂಗವಾಗಬೇಕು ಎಂದು ಒತ್ತಾಯಿಸುತ್ತಲೇ ಇದ್ದಾರೆ. ಸತ್ಯ ತಿಳಿಯಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎನ್ನುವ ವಿಚಾರದಲ್ಲಿ ರಾಜಕಾರಣಿಗಳಿಂತಲೂ ಹೆಚ್ಚು ಬದ್ಧತೆಯನ್ನು ಜನರು ತೋರಿಸುತ್ತಿದ್ದಾರೆ. ಜಾತಿ ಧರ್ಮ ಬೇಧಭಾವವಿಲ್ಲದೇ ಒಂದು ವಿಪಕ್ಷ ಹೇಗೆ ನಿಂತು ಕೆಲಸ ಮಾಡಬೇಕೋ ಅದೇ ರೀತಿಯ ಒಗ್ಗಟ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡು ಬಂದಿದೆ.
ಜನರು ಕೇಳುತ್ತಿರುವ ಪ್ರಶ್ನೆಗಳು ಸ್ಪಷ್ಟವಾಗಿದೆ. ಧರ್ಮಸ್ಥಳದಲ್ಲಿ ವ್ಯಕ್ತಿ ತಲೆಬುರುಡೆ ಬಗ್ಗೆ ದೂರು ನೀಡಿದಾಗ, ತಕ್ಷಣದಲ್ಲಿ ಪೊಲೀಸರು ಯಾಕೆ ಕ್ರಮಕೈಗೊಳ್ಳಲಿಲ್ಲ, ತಲೆಬುರುಡೆಯನ್ನು ಯಾಕೆ ತೆಗೆಸಲಿಲ್ಲ. ನಿಜವಾಗಿಯೂ ಆತ ಹೇಳಿದ್ದು ಸುಳ್ಳಾದರೆ, ನೀವು ಮೊದಲು ಆ ಕೆಲಸ ಮಾಡಿಸುತ್ತಿದ್ದಿರಿ, ಅಲ್ಲಿ ಮೃತದೇಹ ಇಲ್ಲದೇ ಇದ್ದರೆ, ಆತ ಹೇಳಿದ್ದು ಸುಳ್ಳು ಎಂದಾಗುತ್ತಿತ್ತು. ನೀವು ಉತ್ತಮರು ಎನ್ನುವುದನ್ನು ನಿರೂಪಿಸಲು ಅದಕ್ಕಿಂತ ದೊಡ್ಡ ಅವಕಾಶ ಬೇರೊಂದಿರಲಿಲ್ಲ, ಆದರೆ ನೀವು ಆ ಕೆಲಸ ಮಾಡಿಸದೇ, ಯೂಟ್ಯೂಬರ್ ಸಮೀರ್ ಹಾಗೆ, ಹೀಗೆ ಎಂದು ಹೇಳಿದ್ರಿ, ಎಸ್ ಡಿಪಿಐ ಅಂದ್ರಿ, ಕಮ್ಯುನಿಸ್ಟ್ ಅಂದ್ರಿ… ನಂಬಿಕೆ ಅಂದ್ರಿ, ಧಾರ್ಮಿಕತೆ ವಿಚಾರಗಳನ್ನು ಎಳೆದು ತಂದು ಮರೆಮಾಚಿಕೊಳ್ಳಲು ಯತ್ನಿಸಿದಿರಿ. ಹಾಗೆ ಕೇಳುವುದೇ ಆದ್ರೆ, ಮೃತದೇಹ ಹೂತು ಹಾಕಿದ್ದೇನೆ ಎಂದವನು ಮುಸ್ಲಿಮನಾ? ಎಸ್ ಡಿಪಿಐಯವನಾ? ಕಮ್ಯುನಿಸ್ಟ? ಪ್ರಗತಿಪರನಾ? ಅಲ್ಲ ಅಲ್ವಾ? ಆತ ಒಬ್ಬ ಸಾಮಾನ್ಯ ಪೌರಕಾರ್ಮಿಕ. ನನ್ನ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ, ಅವಳನ್ನು ಹುಡುಕಿಕೊಡಿ ಎಂದು ಹೋದಾಗ ನನ್ನ ಮೇಲೆ ಹಲ್ಲೆ ನಡೆಯಿತು, ನನ್ನ ಮಗಳನ್ನು ಹುಡುಕಿಕೊಡಿ ಎಂದ ಅನನ್ಯಾ ಭಟ್ ತಾಯಿ ಸುಜಾತಾ ಭಟ್ ಮುಸ್ಲಿಮರಾ? ಎಸ್ ಡಿಪಿಐಯವರಾ?, ಕಮ್ಯುನಿಸ್ಟರಾ? ಪ್ರಗತಿಪರರಾ? ಖಂಡಿತವಾಗಿಯೂ ಅಲ್ಲ, ಹಾಗಿದ್ದರೆ, ಇದೆಲ್ಲವೂ ನಿಮ್ಮ ತಪ್ಪುಗಳನ್ನು ಮರೆಮಾಚುವ ತಂತ್ರಗಾರಿಕೆ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿದೆ.
ಆ ವ್ಯಕ್ತಿ(ಸಾಕ್ಷಿ) ತಾನು ಯಾರದ್ದೋ ಆಣತಿ ಮೇರೆಗೆ ಶವ ಹೂತು ಹಾಕಿದ್ದೇನೆ ಎಂದಷ್ಟೇ ಹೇಳಿದ್ದಾನೆ. ಆತ ಯಾರದ್ದಾದರೂ ಹೆಸರು ಹೇಳಿರುವ ಬಗ್ಗೆ ಇನ್ನೂ ಮಾಹಿತಿ ಹೊರ ಬಂದಿಲ್ಲ, ಅದಕ್ಕೂ ಮೊದಲೇ, ನೀವು ಇಂತಹ ವ್ಯಕ್ತಿಯ ಬಗ್ಗೆಯೇ ಮಾತನಾಡುತ್ತಿದ್ದೀರಿ ಎಂದು ಹೇಳುತ್ತೀರಾದರೆ, ಅಲ್ಲಿ ಯಾರು ಮೃತದೇಹ ಹೂತು ಹಾಕಿಸುತ್ತಾರೆ ಎನ್ನುವುದು ನಿಮಗೂ ತಿಳಿದಿದೆ ಎಂದರ್ಥವೇ? ವಿಧಾನ ಸಭೆಯಲ್ಲೇ ಧರ್ಮಸ್ಥಳದಲ್ಲಿ ನಾಪತ್ತೆಯಾದವರ, ಅಸಹಜ ಸಾವಿನ ಬಗ್ಗೆ ಉಲ್ಲೇಖ ಇದೆ. ನಾಪತ್ತೆಯಾದವರನ್ನು ಹುಡುಕಿಕೊಂಡು ಬಂದ ಅವರ ಪೋಷಕರನ್ನು ಹೀನಾಯವಾಗಿ ನಡೆಸಿಕೊಂಡ ಬಗ್ಗೆಯೂ ಉಲ್ಲೇಖ ಇದೆ. ಧರ್ಮಸ್ಥಳ ಸುತ್ತಮುತ್ತ ನಡೆಯುತ್ತಿರುವ ಘಟನೆಗಳ ಬಗ್ಗೆ ಒಬ್ಬರು ಇಬ್ಬರು ಮಾತನಾಡುತ್ತಿರುವುದಲ್ಲ, ಇಡೀ ಜಿಲ್ಲೆಯಲ್ಲೇ, ರಾಜ್ಯದಲ್ಲೇ, ದೇಶದಲ್ಲೇ ಜನರು ಚರ್ಚೆ ಮಾಡ್ತಿದ್ದಾರೆ. ಸ್ನಾನಘಟ್ಟ ಇರೋದು ಕೇವಲ ಧರ್ಮಸ್ಥಳದಲ್ಲಿ ಮಾತ್ರವಲ್ಲ, ಕುಕ್ಕೆ ಸುಬ್ರಹ್ಮಣ್ಯದಲ್ಲೂ ಸ್ನಾನಘಟ್ಟ ಇದೆ. ಆದ್ರೆ ಧರ್ಮಸ್ಥಳದಲ್ಲಿ ಮಾತ್ರ ಯಾಕೆ ಇಷ್ಟೊಂದು ಅಸಹಜ ಸಾವುಗಳು ಆಗುತ್ತಿವೆ? ತಿರುಪತಿಗೆ, ಮಂತ್ರಾಲಯಕ್ಕೆ ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಹೋಗ್ತಾರೆ, ಅಲ್ಲಿ ಯಾಕೆ ಇಷ್ಟೊಂದು ಪ್ರಮಾಣದ ಅಸಹಜ ಸಾವು ಆಗ್ತಾ ಇಲ್ಲ? ಈ ಮೊದಲಾದ ಪ್ರಶ್ನೆಗಳು ಸಹಜವಾಗಿಯೇ ಕೇಳಿ ಬಂದಿವೆ. ಧರ್ಮಸ್ಥಳ ಪ್ರಕರಣದಲ್ಲಿ ಮೃತದೇಹವನ್ನು ಹೊರತೆಗೆದರೆ ಸಾಕು, ಉಳಿದ ಸತ್ಯಗಳನ್ನು ಮೃತದೇಹಗಳೇ ಹೇಳಲಿವೆ. ಯಾಕೆಂದರೆ, ಫಾರೆನ್ಸಿಕ್ ನಲ್ಲಿ ಸತ್ಯ ಹೊರ ಬರುತ್ತದೆ. ಸಾವಿರಾರು ವರ್ಷಗಳ ಹಿಂದಿನ ಒಂದು ಮೂಳೆಯನ್ನು ಹಿಡಿದುಕೊಂಡು ಆ ಪ್ರಾಣಿ ಯಾವುದು, ಅದರ ವಯಸ್ಸು ಎಷ್ಟು? ಎಷ್ಟು ವರ್ಷ ಹಳೆಯ ಮೂಳೆ, ಅದು ಹೇಗೆ ಸತ್ತಿತು? ಎನ್ನುವುದನ್ನು ಫಾರೆನ್ಸಿಕ್ ತಜ್ಞರು ಕಂಡು ಹಿಡಿಯಬಲ್ಲರು. ಹಾಗಿದ್ರೆ 11ರಿಂದ 15 ವರ್ಷಗಳ ಹಿಂದಿನ ಮೂಳೆಗಳು ಪತ್ತೆಯಾದರೆ, ಆ ಸಾವು ಹೇಗೆ ಸಂಭವಿಸಿತು ಎನ್ನುವುದನ್ನು ಕಂಡು ಹಿಡಿಯದಿರುತ್ತಾರೆಯೇ? ಮೃತದೇಹಗಳನ್ನು ಹೊರ ತೆಗೆದರೆ ಎಲ್ಲ ಸತ್ಯಗಳೂ ಬಯಲಾಗಲಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD