ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್ ರನ್ನು ಸಂಪುಟದಿಂದ ವಜಾಗೊಳಿಸಿ: ಬಸವರಾಜ ಬೊಮ್ಮಾಯಿ

basavaraj bommai
04/09/2023

ಬೆಂಗಳೂರು: ತಮಿಳುನಾಡು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆ ಖಂಡನೀಯವಾಗಿದ್ದು, ಅವರ ಹೇಳಿಕೆ ಅವರ ಹಿಟ್ಲರ್ ಮನಸ್ಥಿತಿ ತೋರಿಸುತ್ತದೆ. ಚುನಾವಣೆಯಲ್ಲಿ ಒಂದು ವರ್ಗವನ್ನು ಸೆಳೆಯಲು ಈ ರೀತಿ ಮಾಡುತ್ತಾರೆ. ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಉದಯನಿಧಿ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸನಾತನ ಧರ್ಮ ಸರ್ವೇಜನ ಸುಖಿನೊಭವಂತು ಅಂತ ಹೇಳುತ್ತದೆ. ಮಾನವರಷ್ಟೇ ಅಲ್ಲ ಎಲ್ಲ ಜೀವಿಗಳು ಸುಖವಾಗಿರಲಿ ಅಂತ ಸನಾತನ ಧರ್ಮ ಬಯಸುತ್ತದೆ. ಸನಾತನ ಧರ್ಮವನ್ನು ಕಿತ್ತೊಗೆಯಬೇಕೆಂಬ ಮಾತು ಹಿಟ್ಲರ್ ಮೈಂಡ್ ಸೆಟ್, ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಸನಾತನ ಧರ್ಮದಲ್ಲಿ ಎಲ್ಲರಿಗೂ ಸಮಾನ ಅವಕಾಶ ಇದೆ. ಉದಯನಿಧಿ ಸ್ಟಾಲಿನ್ ಸಂವಿಧಾನ ವಿರೊಧಿ ಹೇಳಿಕೆ ನೀಡಿದ್ದಾರೆ. ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಅವರ ಹೇಳಿಕೆ ಬಗ್ಗೆ ಇಂಡಿಯಾ ಕೂಟದ ಮಿತ್ರ ಪಕ್ಷಗಳು ಗೊಂದಲದಲ್ಲಿದ್ದಾವೆ. ಭಾರತದಲ್ಲಿ ಎಲ್ಲ ಧರ್ಮಗಳಿಗೆ ಅವಕಾಶ ಇದೆ. ಇಲ್ಲಿ ಬೌದ್ದ, ಜೈನ, ಸಿಖ್, ಇಸ್ಲಾಂ, ಸಿಖ್ ಧರ್ಮಗಳು ನೆಮ್ಮದಿಯಾಗಿವೆ. ಸುತ್ತಲಿನ ರಾಷ್ಟ್ರಗಳಲ್ಲಿ ಏನು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಅಧಿಕಾರದ ಆಸೆಗೆ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಭಾರತದ ಜನರು ಇದೆಲ್ಲವನ್ನು ಗಮನಿಸುತ್ತಾರೆ. ಅವರು ಸೂಕ್ತ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಉಚಿತ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಜನರ ಆದಾಯ ಹೆಚ್ಚಾಗಿ ಆರ್ಥಿಕತೆ ಹೆಚ್ಚಾಗಬೇಕು, ಆಗ ದೇಶ ಮತ್ತು ವ್ಯಕ್ತಿಗತ ಅಭಿವೃದ್ಧಿಗೆ ಅವಕಾಶ ಸಿಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇದು ಶಾರ್ಟ್ ಪಿರಿಯಡ್ ಅಷ್ಟೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದರು.

ವಿದ್ಯುತ್ ನಿರ್ವಹಣೆ ವಿಫಲ:

ಈ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದೆ. ಈಗಾಗಲೇ ಲೊಡ್ ಶೆಡ್ಡಿಂಗ್ ರಾಜ್ಯಾಧ್ಯಂತ ಆರಂಭವಾಗಿದೆ. ಈ ಸರ್ಕಾರ ವಿದ್ಯುತ್ ಕ್ಷೇತ್ರ ನಿರ್ಲಕ್ಷ್ಯ ಮಾಡಿದೆ. ನಾವು ಇದ್ದಾಗ ಹೆಚ್ಚುವರಿ ಉತ್ಪಾದನೆಯಾದ ವಿದ್ಯುತ್ ಮಾರಿ ಎರಡು ಸಾವಿರ ಕೋಟಿ ರೂ. ಆದಾಯ ಗಳಿಸಿದ್ದೇವು. ಈ ಸರ್ಕಾರ ಕಲ್ಲಿದ್ದಲು ಉತ್ಪಾದನೆ ಪೂರ್ಣ ಪ್ರಮಾಣದಲ್ಲಿ ಅಗುತ್ತಿಲ್ಲ. ಮಳೆ ಬಾರದೇ ಜಲ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಹಣಕಾಸಿನ ಸರಿಯಾದ ನಿರ್ವಹಣೆ ಇಲ್ಲದಿರುವುದಕ್ಕೆ ಇದೆಲ್ಲ ಆಗುತ್ತಿದೆ ಎಂದರು.

ಕಾವೇರಿ ನಿರ್ವಹಣೆ: ಆರಂಭದಿಂದಲೂ ವಿಫಲ:

ಕಾವೇರಿ ನೀರು ನಿರ್ವಹಣೆಯಲ್ಲಿ ಸರ್ಕಾರ ಆರಂಭದಿಂದಲೂ ವಿಫಲ ಆಗಿದೆ. ಜೂನ್ ತಿಂಗಳಲ್ಲಿ ಮಳೆ ಕಡಿಮೆ ಆದಾಗಲೇ ಎಚ್ಚೇತ್ತಕೊಳ್ಳಬೇಕಿತ್ತು. ನಮ್ಮ ರೈತರಿಗೆ ಆರಂಭದಲ್ಲಿ ನೀರು ಬಿಡಲಿಲ್ಲ. ತಮಿಳುನಾಡಿಗೆ ನಿರಂತರ ನೀರು ಹರಿಸುತ್ತಿದ್ದಾರೆ. ತಮಿಳುನಾಡು ಸರ್ಕಾರ 15000 ಕ್ಯೂಸೆಕ್ಸ್ ನೀರು ಕೇಳಿತ್ತು. ನಾವು 5 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದೇ ಇವರ ಸಾಧನೆ ಎಂದು ವಾಗ್ದಾಳಿ ನಡೆಸಿದರು.

ಮೇಕೆದಾಟು ಯೋಜನೆಗೆ ಶತಮಾನಗಳಿಂದಲೂ ಬೇಡಿಕೆ ಇದೆ. ನಮ್ಮ ಅವಧಿಯಲ್ಲಿ ಕಾಂಗ್ರೆಸ್ ನವರು ಪಾದಯಾತ್ರೆ ಮಾಡಿ ಪ್ರಚಾರ ಗಿಟ್ಟಿಸಿಕೊಂಡರು ಆಗ ಈ ಪ್ರಕರಣ ಕೋರ್ಟ್ನಲ್ಲಿದೆ ಅಂತ ಹೇಳಿದಾಗ ನಂಬಲಿಲ್ಲ. ಈಗ ಸಿದ್ದರಾಮಯ್ಯ ಪ್ರಕರಣ ಕೋರ್ಟ್ ನಲ್ಲಿದೆ ಅಂತ ಹೇಳುತ್ತಿದ್ದಾರೆ. ಸತ್ಯ ಅವರ ಬಾಯಿಂದಲೇ ಹೊರ ಬಂದಿದೆ.

ಈಗ ಎರಡೂ ರಾಜ್ಯಗಳಲ್ಲಿ ನೀರಾವರಿಗೆ ಹೆಚ್ಚಿನ ಬೇಡಿಕೆ ಇದೆ. ಎರಡೂ ರಾಜ್ಯಗಳಿಗೂ ನೀರಿನ ಅಗತ್ಯ ಹೆಚ್ಚಿದ. ಅದಕ್ಕಾಗಿ ಮತ್ತೊಂದು ಡ್ಯಾಮ್ ಮೂಲಕ ನೀರು ಸಂಗ್ರಹಿಸಿ ಬಳಕೆ ಮಾಡಿಕೊಳ್ಳುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ಕೃಷ್ಣಾ ಯೋಜನೆ ವಿಚಾರದಲ್ಲಿ ಭೂ ಸ್ವಾಧಿನಕ್ಕೆ ಹೊಸ ನಿಯಮಗಳ ಪ್ರಕಾರ ಪರಿಹಾರ ಕೊಡಬೇಕು. ಇವರು ರೈತರನ್ನು ಸಂಪೂರ್ಣ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಫಲಾನುಭವಿಗಳಿಗೆ ಅನ್ಯಾಯ:

ಅನ್ನಭಾಗ್ಯ ಯೋಜನೆಯಲ್ಲಿ ಸುಮಾರು 39 ಲಕ್ಷ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲು ನೀಡುವ ಹಣ ತಲುಪಿಲ್ಲ. ಅದಕ್ಕೆ ಸರ್ಕಾರ ತಾಂತ್ರಿಕ ಕಾರಣದ ಕುಂಟು ನೆಪ ಹೇಳುತ್ತಿದೆ. ಕಳೆದ ಎರಡು ತಿಂಗಳಿಂದ ಅಕ್ಕಿ ಪಡೆಯುತ್ತಿದ್ದವರು ಹೇಗೆ ಅನರ್ಹ ಆಗುತ್ತಾರೆ. ಮುಂದಿನ ದಿನಗಳಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಅನಷ್ಠಾನದಲ್ಲಿಯೂ ಇದೇ ರೀತಿ ಫಲಾನುಭವಿಗಳಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.

ಪಕ್ಷಾಂತರಕ್ಕೆ ಎಂಪಿ ಚುನಾವಣೆ ಉತ್ತರ:

ಪಕ್ಷಾಂತರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಚುನಾವಣೆ ಮುಗಿದು ಮತ್ತೊಂದು ಚುನಾವಣೆ ಬರುವ ಸಂದರ್ಭದಲ್ಲಿ ಈ ರೀತಿಯ ಮಾತುಗಳು ಕೇಳಿ ಬರುತ್ತವೆ. ನಾನು ಯಾರ ಹೇಳಿಕೆಗಳಿಗೂ ಪ್ರತಿಕ್ರಿಯೆ ನೀಡುವುದಿಲ್ಲ. ಇದಕ್ಕೆಲ್ಲ ಲೋಕಸಭೆ ಚುನಾವಣೆ ಫಲಿತಾಂಶ ಉತ್ತರ ನೀಡಲಿದೆ. ಲೋಕಸಭೆ ಚುನಾವಣೆ ಫಲಿತಾಂಶ ಈ ಸರ್ಕಾರದ ಭವಿಷ್ಯವನ್ನೂ ನಿರ್ಧರಿಸಲಿದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿ

Exit mobile version