ಹಿಂದೂ ದೇವಾಲಯಕ್ಕೆ ಕ್ರಿಶ್ಚಿಯನ್ ಧರ್ಮಗುರುಗಳ ಪ್ರವೇಶ ಪ್ರಕರಣ: ಹೈಕೋರ್ಟ್ ನಿಂದ ಮಹತ್ವದ ತೀರ್ಪು

christians priests in hindu temple
09/02/2026

ತಿರುವನಂತಪುರಂ: ಹಿಂದೂ ದೇವಾಲಯಗಳಿಗೆ ಅನ್ಯಧರ್ಮೀಯರ ಪ್ರವೇಶವನ್ನು ನಿರ್ಬಂಧಿಸುವ ನಿಯಮಗಳ ಕುರಿತು ಕೇರಳ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ದೇವಾಲಯಕ್ಕೆ ಕ್ರಿಶ್ಚಿಯನ್ ಧರ್ಮಗುರುಗಳ ಪ್ರವೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, “ಧಾರ್ಮಿಕ ಸೌಹಾರ್ದತೆಯನ್ನು ಕದಡಲು ನಿಯಮಗಳನ್ನು ಬಳಸಬಾರದು” ಎಂದು ಹೇಳಿದೆ.

ಘಟನೆಯ ಹಿನ್ನೆಲೆ: 2023ರಲ್ಲಿ ಅಡೂರ್‌ ನ ಶ್ರೀ ಪಾರ್ಥಸಾರಥಿ ದೇವಾಲಯಕ್ಕೆ ಆಹ್ವಾನದ ಮೇರೆಗೆ ಇಬ್ಬರು ಕ್ರಿಶ್ಚಿಯನ್ ಧರ್ಮಗುರುಗಳು ಭೇಟಿ ನೀಡಿದ್ದರು. ಇದನ್ನು ಪ್ರಶ್ನಿಸಿ ಸನಿಲ್ ನಾರಾಯಣನ್ ಎಂಬ ಭಕ್ತರೊಬ್ಬರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೇರಳ ಹಿಂದೂ ಸಾರ್ವಜನಿಕ ಆರಾಧನಾ ಸ್ಥಳಗಳ (ಪ್ರವೇಶ ಅಧಿಕಾರ) ನಿಯಮ 3(ಎ) ಅಡಿಯಲ್ಲಿ ಅನ್ಯಧರ್ಮೀಯರಿಗೆ ಪ್ರವೇಶ ನಿಷೇಧವಿದೆ ಎಂಬುದು ಅರ್ಜಿದಾರರ ವಾದವಾಗಿತ್ತು.

ಹೈಕೋರ್ಟ್ ಹೇಳಿದ್ದೇನು?

ಜಸ್ಟಿಸ್ ರಾಜಾ ವಿಜಯರಾಘವನ್ ಮತ್ತು ಕೆ.ವಿ. ಜಯಕುಮಾರ್ ಅವರಿದ್ದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿತು.  ಕಾನೂನು ಎಂಬುದು ಸ್ಥಿರವಾದುದಲ್ಲ, ಅದು ಸಮಾಜದ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತಿರಬೇಕು. ಅಂತರ್ಗತ ಸಮಾಜವನ್ನು ನಿರ್ಮಿಸುವಲ್ಲಿ ಶಾಸನಬದ್ಧ ನಿಬಂಧನೆಗಳು ಸಹಕಾರಿಯಾಗಬೇಕೇ ಹೊರತು, ವಿವಿಧ ಧರ್ಮಗಳ ನಡುವೆ ದ್ವೇಷ ಬಿತ್ತಲು ಅವು ಬಳಕೆಯಾಗಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಮೂಲ ಕಾಯಿದೆಯಲ್ಲಿ ಅನ್ಯಧರ್ಮೀಯರ ಪ್ರವೇಶಕ್ಕೆ ನಿಷೇಧವಿಲ್ಲದಿದ್ದರೂ, ಅದರ ಅಡಿಯಲ್ಲಿ ಮಾಡಿದ ‘ನಿಯಮ 3(ಎ)’ ನಲ್ಲಿ ನಿಷೇಧವಿದೆ. ಮೂಲ ಕಾನೂನಿಗಿಂತ ನಿಯಮಗಳು ಮೇಲಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಅನ್ಯಧರ್ಮೀಯರ ಪ್ರವೇಶಕ್ಕೆ ನಿರ್ಬಂಧ ಹೇರುವ ಈ ನಿಯಮವನ್ನು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ತಿದ್ದುಪಡಿ ಮಾಡುವ ಅಥವಾ ಮರುಪರಿಶೀಲಿಸುವ ಬಗ್ಗೆ ದೇವಸ್ವಂ ಮಂಡಳಿ, ತಂತ್ರಿಗಳು ಮತ್ತು ಧಾರ್ಮಿಕ ವಿದ್ವಾಂಸರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಅಗತ್ಯ ಧಾರ್ಮಿಕ ಆಚರಣೆಯಲ್ಲ: ಅನ್ಯಧರ್ಮೀಯರ ಪ್ರವೇಶ ನಿರ್ಬಂಧಿಸುವುದು ಹಿಂದೂ ಧರ್ಮದ ‘ಅಗತ್ಯ ಧಾರ್ಮಿಕ ಆಚರಣೆ’ (Essential Religious Practice) ಅಲ್ಲ ಎಂದು ಅಮಿಕಸ್ ಕ್ಯೂರಿ ನೀಡಿದ ಅಭಿಪ್ರಾಯವನ್ನು ಕೋರ್ಟ್ ಗಮನಿಸಿದೆ.

ದೇವಸ್ವಂ ಮಂಡಳಿಯು ಕೂಡ ಆ ಕ್ರಿಶ್ಚಿಯನ್ ಧರ್ಮಗುರುಗಳನ್ನು ಅತಿಥಿಗಳಾಗಿ ಆಹ್ವಾನಿಸಲಾಗಿತ್ತು ಮತ್ತು ದೇವಾಲಯದ ತಂತ್ರಿಗಳ ಅನುಮತಿಯ ಮೇರೆಗೆ ಅವರು ಪ್ರವೇಶಿಸಿದ್ದರು ಎಂದು ಸ್ಪಷ್ಟಪಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version