ದಲಿತರಿಗೆ ಹೃದಯ ಇಲ್ವಾ?: ಮರ್ಯಾದ ಹತ್ಯೆಯನ್ನು ಖಂಡಿಸಿ ಹಿಂದೂ ನಾಯಕರಿಗೆ ಮಾದರಿಯಾದ ಪ್ರಮೋದ್ ಮುತಾಲಿಕ್
ಬೆಂಗಳೂರು/ವಿಜಯಪುರ: ಹುಬ್ಬಳ್ಳಿಯಲ್ಲಿ ನಡೆದ ಭೀಕರ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹತ್ಯೆಗೀಡಾದ ಯುವಕನ ಕುಟುಂಬಕ್ಕೆ ಇತ್ತೀಚೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಘಟನೆಯನ್ನು “ಅತ್ಯಂತ ಕ್ರೂರ ಮತ್ತು ರಾಕ್ಷಸೀಯ ಕೃತ್ಯ” ಎಂದು ಬಣ್ಣಿಸಿದ್ದಾರೆ.
ದಲಿತರಿಗೆ ಹೃದಯ ಇಲ್ವಾ?: ದಲಿತ ಯುವಕ ಪ್ರೀತಿಸಿದ ಕಾರಣಕ್ಕಾಗಿ ಈ ರೀತಿ ಕೊಲೆ ಮಾಡಿರುವುದು ಅಂಬೇಡ್ಕರ್ ಅವರ ಕನಸು ಇನ್ನೂ ನನಸಾಗಿಲ್ಲ ಎಂಬುದಕ್ಕೆ ಸಾಕ್ಷಿ. ದಲಿತರಿಗೆ ಪ್ರೀತಿ ಮಾಡುವ ಹಕ್ಕಿಲ್ಲವೇ? ಅವರಿಗೆ ಹೃದಯವಿಲ್ಲವೇ? ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.
ಗರ್ಭಿಣಿ ಮಗಳನ್ನೂ ಬಿಡದ ಕ್ರೌರ್ಯ: ಹತ್ಯೆಗೀಡಾದ ಯುವತಿ ಗರ್ಭಿಣಿಯಾಗಿದ್ದಳು. ತನ್ನ ಮಗಳು, ತನ್ನ ಮಗು ಎಂಬ ಮಮತೆಯೂ ಇಲ್ಲದೆ ಹೊಟ್ಟೆಗೆ ಕುಡುಗೋಲಿನಿಂದ (ಕುರಪಿ) ಇರಿದು ಕೊಂದಿರುವ ಇವರು ಮನುಷ್ಯರೇ ಅಥವಾ ರಾಕ್ಷಸರೇ? ಎಂದು ಅವರು ಕಿಡಿಕಾರಿದ್ದಾರೆ.
ಎನ್ಕೌಂಟರ್ ಮಾಡಲು ಆಗ್ರಹ: ಇಂತಹ ಕ್ರೂರಿಗಳಿಗೆ ಕೋರ್ಟು, ಜೈಲು ಎಂದು ಕಾಲಹರಣ ಮಾಡಬಾರದು. ಅವರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು (ಶೂಟ್ ಮಾಡಬೇಕು). ಆ ಯುವಕನ ತಂಗಿ ಕೂಡ ತನ್ನ ಕಣ್ಣೆದುರೇ ಅಣ್ಣನ ಹೆಂಡತಿಯನ್ನು ಕೊಂದವರನ್ನು ಅದೇ ರೀತಿ ಕೊಲ್ಲಬೇಕೆಂದು ಒತ್ತಾಯಿಸುತ್ತಿದ್ದಾಳೆ ಎಂದು ಮುತಾಲಿಕ್ ಹೇಳಿದರು.
ಪರಿಹಾರಕ್ಕೆ ಒತ್ತಾಯ: ಸಂತ್ರಸ್ತ ಕುಟುಂಬಕ್ಕೆ ಕೇವಲ 50 ಲಕ್ಷ ರೂಪಾಯಿ ಸಾಲದು, ಕೋಟಿಗಟ್ಟಲೆ ಪರಿಹಾರ ನೀಡಿದರೂ ಅವರ ನೋವು ತೀರದು. ಸರ್ಕಾರ ಕೂಡಲೇ ಅವರ ರಕ್ಷಣೆಗೆ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಅಸಮಾಧಾನ: ಈ ಪ್ರಕರಣದಲ್ಲಿ ಪೊಲೀಸರನ್ನು ಸಸ್ಪೆಂಡ್ ಮಾಡಿರುವುದು ತಪ್ಪು. ಕರ್ತವ್ಯ ಲೋಪ ಎಸಗಿರುವ ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಘಟನೆಯಿಂದಾಗಿ ಇಡೀ ಕುಟುಂಬ ಭಯದ ನೆರಳಿನಲ್ಲಿ ಬದುಕುತ್ತಿದೆ. ಸಣ್ಣ ಮಗು ಕೂಡ ಹೊರಬರಲು ಹೆದರುತ್ತಿದೆ. ಇಂತಹ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























