ಬ್ರೆಡ್ ಪ್ಯಾಕೆಟ್ ನಲ್ಲಿ ಡ್ರಗ್ಸ್ ಸಾಗಾಟ: 1.2 ಕೋಟಿ ಮೌಲ್ಯದ ಕೊಕೇನ್ ಸಹಿತ ವಿದೇಶಿ ಯುವತಿ ಬಂಧನ
ಬೆಂಗಳೂರು: ಹೊಸ ವರ್ಷದ ಆಚರಣೆ ಹತ್ತಿರವಾಗುತ್ತಿದ್ದಂತೆ ರಾಜಧಾನಿಯಲ್ಲಿ ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಸಿಸಿಬಿ ಪೊಲೀಸರು ಸಮರ ಸಾರಿದ್ದಾರೆ. ಬ್ರೆಡ್ ಪ್ಯಾಕೆಟ್‌ನಲ್ಲಿ ಅತ್ಯಂತ ಚಾಣಾಕ್ಷತನದಿಂದ ಮಾದಕ ವಸ್ತು ಬಚ್ಚಿಟ್ಟು ಸಾಗಿಸುತ್ತಿದ್ದ ನೈಜೀರಿಯಾ ಮೂಲದ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತಳಿಂದ ಸುಮಾರು 1.20 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶಪಡಿಸಿಕೊಳ್ಳಲಾಗಿದೆ.
ನೈಜೀರಿಯಾ ಮೂಲದ ಒಲಾಜಿಡೆ ಎಸ್ತಾರ್ ಬಂಧಿತ ಆರೋಪಿಯಾಗಿದ್ದಾಳೆ. ಈಕೆ ಮುಂಬೈನಿಂದ ಬೆಂಗಳೂರಿಗೆ ಖಾಸಗಿ ಬಸ್ ಮೂಲಕ ಮಾದಕ ವಸ್ತುಗಳನ್ನು ತರುತ್ತಿದ್ದಳು. ಯಾರಿಗೂ ಅನುಮಾನ ಬಾರದಂತೆ ಬ್ರೆಡ್ ತುಂಡುಗಳ ನಡುವೆ 121 ಗ್ರಾಂ ತೂಕದ ಕೊಕೇನ್ ಅನ್ನು ಕವರ್‌ನಲ್ಲಿ ಪ್ಯಾಕ್ ಮಾಡಿ ಬಚ್ಚಿಟ್ಟಿದ್ದಳು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಇನ್ಸ್‌ಪೆಕ್ಟರ್ ರಕ್ಷಿತ್ ನೇತೃತ್ವದ ತಂಡ ಆರೋಪಿಯನ್ನು ಸೆರೆಹಿಡಿದಿದೆ.
ತನಿಖೆಯ ವೇಳೆ ಲಭ್ಯವಾದ ಮಾಹಿತಿಯಂತೆ, ಬಂಧಿತ ಯುವತಿ 2024ರಲ್ಲಿ ವಿದ್ಯಾರ್ಥಿ ವೀಸಾದಡಿ ದೆಹಲಿಗೆ ಬಂದಿದ್ದಳು. ಆದರೆ ಕಾಲೇಜಿಗೆ ಸೇರದೆ ಡ್ರಗ್ಸ್ ದಂಧೆಕೋರರ ಸಂಪರ್ಕ ಬೆಳೆಸಿದ್ದಳು. ಮುಂಬೈನಲ್ಲಿದ್ದ ತನ್ನ ಸ್ನೇಹಿತ ನೀಡುತ್ತಿದ್ದ ಮಾದಕ ವಸ್ತುಗಳನ್ನು ಬೇರೆ ಬೇರೆ ನಗರಗಳಿಗೆ ಪೆಡ್ಲಿಂಗ್ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಳು. ಸದ್ಯ ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























