ಪ್ರಾಣ ಹೋದರೂ, ಭೂಮಿ ಬಿಡುವುದಿಲ್ಲ: ರೈತ ಹೋರಾಟಕ್ಕೆ ಕೈಜೋಡಿಸಿ: ಚುನಪ್ಪ ಪೂಜೇರಿ ಕರೆ

ಮುಗಳಖೋಡ: ಸುಮಾರು 69 ವರ್ಷಗಳಿಂದ ಘಟಪ್ರಭಾ ಎಡದಂಡೆ ಕಾಲುವೆಯನ್ನು ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದೇವೆ. ಆದರೆ ಈಗ ಕಾಲುವೆ ಸುತ್ತ ಮುತ್ತ ಇರುವ ಬಾವಿ, ಕೊಳವೆ ಬಾವಿ, ಪೈಲೈನ್ ಗಳನ್ನು ಬಿಡಬೇಕೆಂದು ಹೈಕೋರ್ಟ್ ನಿಂದ ನೊಟೀಸ್ ನೀಡಿದ್ದಾರೆ. ಇದರಿಂದ ಸರ್ಕಾರ ನಮ್ಮ ಅನ್ನವನ್ನು ಕಸಿದುಕೊಳ್ಳುತ್ತಿದೆ. ಇದರ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಕರೆ ನೀಡಿದರು.
ಅವರು ಪಟ್ಟಣದ ಬಜರಂಗದಳದ ಕಟ್ಟೆಯ ಬಳಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಘಟಪ್ರಭಾ ಎಡದಂಡೆ ಕಾಲುವೆಯಿಂದ ಲಕ್ಷಾಂತರ ರೈತ ಕುಟುಂಬಗಳು ಜೀವನ ನಡೆಸುತ್ತಿವೆ. ಈ ವಿಷಯ ಸರ್ಕಾರಕ್ಕೆ ಗೊತ್ತಿದ್ದರೂ ಕೂಡಾ ಈ ಸರ್ಕಾರ ಈ ನಿರ್ಧಾರ ಮಾಡಿದೆ. ನಾವು ರೈತರು ಕಾರ್ಖಾನೆಗಳನ್ನಾಗಲಿ, ಇಂಡಸ್ಟ್ರಿಗಳನ್ನಾಗಲಿ ಮಾಡಿರುವುದಿಲ್ಲ, ಜನತೆಗೆ ದುಡಿದು ಆಹಾರ ಭದ್ರತೆಗಾಗಿ ಬೆಳೆ ಬೆಳೆದಿದ್ದೇವೆ. ನಾವು ರೈತರು ನಮ್ಮ ಪ್ರಾಣ ಹೋದರು ಯಾವುದೇ ಕಾರಣಕ್ಕೂ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ನಮ್ಮ ಭೂಮಿ ನಮ್ಮ ಹಕ್ಕು ಎಂದು ಘೋಷಣೆ ಕೂಗಿ ಅಧಿಕಾರಿಗಳ ವಿರುದ್ಧ ಗುಡುಗಿದರು.
ನಂತರ ಇದೆ ತಿಂಗಳು ಬರುವ 21 ರಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಹೋರಾಟವನ್ನು ಮಾಡಲಿದ್ದೇವೆ ಆದ್ದರಿಂದ ಕಾಲುವೆಗೆ ಹೊಂದಿಕೊಂಡ ಪಟ್ಟಣ ಸೇರಿದಂತೆ ಇಟನಾಳ, ಸವಸುದ್ದಿ, ಕಂಕಣವಾಡಿ, ಕಪ್ಪಲಗುದ್ದಿ, ಪಾಲಬಾವಿ, ಸುಲ್ತಾನಪೂರ, ಹಂದಿಗುಂದ, ಖಣದಾಳ, ಹಾಗೂ ಕಟಕಬಾವಿಯ ಎಲ್ಲ ರೈತರು ನಮ್ಮೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಹೋರಾಟವನ್ನು ಯಶಸ್ವಿ ಮಾಡಬೇಕೆಂದು ರೈತರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ರೈತ ಮುಂಖಡ ಮಲ್ಲಪ್ಪ ಅಂಗಡಿ, ಜ್ಞಾನೇಶ್ವರ ಅಳಗೋಡಿ, ರಮೇಶ ಕಲ್ಲಾರ, ಕಲ್ಯಾಣಿ ಮಗದುಮ, ಕೆಂಪಣ್ಣ ಅಂಗಡಿ, ವಿವೇಕ ಪೂಜಾರಿ, ಲಕ್ಕಪ್ಪ ಜೋಡಟ್ಟಿ, ಬೀಮಪ್ಪ ಯತ್ತಿನಮನಿ, ಪುಂಡಲಿಕ ಹುಕ್ಕೇರಿ ಹಾಗೂ ಪಟ್ಟಣದ ರೈತರು ಇದ್ದರು.
ವರದಿ: ಸಂತೋಷ ಮುಗಳಿ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97