ಸಾಕು ನಾಯಿ ವಿಚಾರದಲ್ಲಿ ನಾಯಿ ಮಾಲಿಕರ ನಡುವೆ ಕಚ್ಚಾಟ: ಗುಂಡು ಹಾರಿಸಿ ಇಬ್ಬರ ಬರ್ಬರ ಹತ್ಯೆ

dog
18/08/2023

ಸಾಕು ನಾಯಿಗಳ ವಿಚಾರದಲ್ಲಿ ನೆರೆಹೊರೆಯವರ ನಡುವಿನ ಜಗಳದಲ್ಲಿ ಇಬ್ಬರನ್ನು ಗುಂಡಿಕ್ಕಿ ಕೊಂದ ಘಟನೆ ಇಂದೋರ್‌ನಲ್ಲಿ ಗುರುವಾರ ನಡೆದಿದೆ.

ಬ್ಯಾಂಕ್‌ ಸೆಕ್ಯುರಿಟಿ ಗಾರ್ಡ್‌ ಅಗಿರುವ ರಾಜ್‌ಪಾಲ್‌ ಸಿಂಗ್‌ ರಜಾವತ್‌ ಎಂಬಾತ ರಾತ್ರಿ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡು ಗುಂಡು ಹಾರಿಸಿದ್ದು, ಪರಿಣಾಮವಾಗಿ ಇಬ್ಬರು ಸಾವನ್ನಪ್ಪಿ ಆರು ಮಂದಿ ಗಾಯಗೊಂಡಿದ್ದಾರೆ.

ರಜಾವತ್‌ ಮತ್ತಾತನ ನೆರೆಮನೆಯಾತ ವಿಮಲ್‌ ಅಚಲ (35) ಕೃಷ್ಣ ಬಾಗ್‌ ಕಾಲನಿಯ ಕಿರಿದಾದ ಮಾರ್ಗದಲ್ಲಿ ರಾತ್ರಿ 11 ಗಂಟೆ ವೇಳೆ ತಮ್ಮ ನಾಯಿಗಳೊಂದಿಗೆ ವಾಕಿಂಗ್‌ಗೆ ಹೋಗಿದ್ದ ವೇಳೆ ಇಬ್ಬರ ನಾಯಿಗಳು ಪರಸ್ಪರ ಕಚ್ಚಾಡಿದ್ದವು. ನಾಯಿಗಳ ಕಚ್ಚಾಟದ ಬಳಿಕ ನಾಯಿಯ ಮಾಲಿಕರಿಬ್ಬರು ಈ ವಿಚಾರದಲ್ಲಿ ಕಚ್ಚಾಡಿದ್ದಾರೆ. ಕಚ್ಚಾಟ ವಿಕೋಪಕ್ಕೆ ತಿರುಗಿದಾಗ ರಜಾವತ್ ತನ್ನ ಮನೆಗೆ ಓಡಿ ಬಾಲ್ಕನಿಯಲ್ಲಿ ನಿಂತು ಗುಂಡು ಹಾರಿಸಿದ್ದು, ಪರಿಣಾಮವಾಗಿ ನಗರದಲ್ಲಿ ಸೆಲೂನ್‌ ನಡೆಸುವ ಅಚಲ್ ಹಾಗೂ ಇನ್ನೊಬ್ಬ ನೆರೆಮನೆಯಾತ 27 ವರ್ಷದ ರಾಹುಲ್‌ ವರ್ಮಾ ಎಂಬವರು ಸಾವನ್ನಪ್ಪಿದರೆ, ಇತರ 6 ಮಂದಿ ಗಾಯಗೊಂಡಿದ್ದಾರೆ.

ರಜಾವತ್ ನಡೆಸಿದ ಹುಚ್ಚಾಟದ ಭಯಾನಕ ಘಟನೆಯನ್ನು ಸಾರ್ವಜನಿಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಜಾವತ್‌, ಆತನ ಪುತ್ರ ಸುಧೀರ್‌ ಮತ್ತು ಇನ್ನೊಬ್ಬ ಸಂಬಂಧಿಯನ್ನು ಬಂಧಿಸಿದ್ದಾರೆ.

 

ಇತ್ತೀಚಿನ ಸುದ್ದಿ

Exit mobile version