ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಮೆದುಳಿನ ಮೈಲ್ಡ್ ಸ್ಟ್ರೋಕ್: ಈಗ ಹೇಗಿದೆ ಅವರ ಆರೋಗ್ಯ?

h d kumaraswamy
31/08/2023

ಬೆಂಗಳೂರು: ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮೆದುಳಿನ ಮೈಲ್ಡ್ ಸ್ಟ್ರೋಕ್ ಆಗಿತ್ತು. ಆದರೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ಕುಮಾರಸ್ವಾಮಿ ಅವರ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ನೀಡಿರುವ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ, ಅಸ್ವಸ್ಥತೆ ಹಾಗೂ ಮಾತಿನ  ಅಸ್ಪಷ್ಟತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು 3:40ರ ಸುಮಾರಿಗೆ ಆಸ್ಪತ್ರೆಗೆ ಬಂದಿದ್ದರು. ಕೂಡಲೇ ತಪಾಸಣೆ ನಡೆಸಿ ಐಸಿಯುಗೆ ದಾಖಲಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿಯವರಿಗೆ ತಕ್ಷಣವೇ ನರರೋಗ ತಜ್ಞ ಡಾ.ಪಿ.ಸತೀಶ್ ಚಂದ್ರ ಮತ್ತು ಅವರ ತಂಡ ಚಿಕಿತ್ಸೆ ನೀಡಿತ್ತು. ಗೋಲ್ಡನ್ ಹವರ್ ಒಳಗೆ ಕುಮಾರಸ್ವಾಮಿ ಅವರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರ ಮೆದುಳಿನ ಬಲಭಾಗಕ್ಕೆ ಮೈಲ್ಡ್ ಸ್ಟ್ರೋಕ್ ಆಗಿತ್ತು. ಚಿಕಿತ್ಸೆಯ ನಂತರ ಶೀಘ್ರಗತಿಯಲ್ಲಿ ಗುಣಮುಖರಾಗುತ್ತಿದ್ದಾರೆ. ಶುಕ್ರವಾರವೇ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಸುಳ್ಳು ಸುದ್ದಿ ಹರಡಬೇಡಿ:

ಜ್ವರ ಕಾಣಿಸಿಕೊಂಡ ಹಿನ್ನೆಲೆ ಕುಮಾರಸ್ವಾಮಿ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದೆವು.  ಅವರು ಆರೋಗ್ಯವಾಗಿದ್ದಾರೆ.  ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ಅವರು ಸುಸ್ತಾಗಿದ್ದರು. ಅವರ ಆರೋಗ್ಯ ಇದೀಗ ಸ್ಥಿರವಾಗಿದೆ. ಶುಕ್ರವಾರವೇ ಆಸ್ಪತ್ರೆಯಿಂದ ಬಂದು ನಿಮ್ಮನ್ನೆಲ್ಲ ಭೇಟಿಯಾಗುತ್ತಾರೆ. ಯಾರು ಕೂಡ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನ ಹರಡುವುದು ಬೇಡ ಎಂದು ಅನಿತಾ ಕುಮಾರಸ್ವಾಮಿ ಮನವಿ ಮಾಡಿಕೊಂಡರು.

ಇತ್ತೀಚಿನ ಸುದ್ದಿ

Exit mobile version