ಅಲರ್ಟ್: ತಿರುಪತಿ ದರ್ಶನಕ್ಕೆ ಹೋಗುವವರು ಇನ್ಮುಂದೆ ಈ ನಿಯಮ ಪಾಲಿಸಲೇಬೇಕು: ಯಾವ ರೂಲ್ಸ್ ಗೊತ್ತಾ..?

ಆಂಧ್ರಪ್ರದೇಶದಲ್ಲಿ ತಿರುಪತಿ ದರ್ಶನಕ್ಕೆ ಹೋಗುತ್ತಿದ್ದ 6 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ನಡೆಸಿ ಕೊಂದ ಘಟನೆ ಬೆನ್ನಲ್ಲೇ ತಿರುಪತಿ ತಿರುಮಲ ದೇವಾಲಯ ಆಡಳಿತ ಮಂಡಳಿ ಭಕ್ತರ ಸುರಕ್ಷತೆಗಾಗಿ ಹೊಸ ನಿಯಮಗಳನ್ನ ಪ್ರಕಟಿಸಿದೆ. ಪಾದಚಾರಿ ಮಾರ್ಗಗಳ ಮೂಲಕ ಸಾಗುವ ಭಕ್ತರು ಹೊಸ ನಿಯಮಗಳನ್ನ ಪಾಲಿಸಲೇಬೇಕಾಗಿದೆ.
ಈ ಕುರಿತು ಟಿಟಿಡಿ ಅಧ್ಯಕ್ಷ ಬಿ ಕರುಣಾಕರ ರೆಡ್ಡಿ ಜಿಲ್ಲಾ ಮತ್ತು ಅರಣ್ಯಾಧಿಕಾರಿಗಳ ಜೊತೆಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೆಲವೊಂದು ನಿರ್ಧಾರಗಳನ್ನ ಕೈಗೊಳ್ಳಲಾಗಿದೆ.
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಫುಟ್‌ಪಾತ್ ಮಾರ್ಗದಲ್ಲಿ ಸಂಚರಿಸುವ ಭಕ್ತರು ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಚಾರಣ ಕೈಗೊಳ್ಳಲು ಅವಕಾಶ ನೀಡಲಾಗುತ್ತದೆ. ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ದ್ವಿಚಕ್ರ ವಾಹನ ಘಾಟಿ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿದೆ.
ಪಾದಯಾತ್ರೆಗೆ ತೆರಳುವ ಪ್ರತಿಯೊಬ್ಬ ಭಕ್ತರಿಗೂ ಕೋಲು ನೀಡಲಾಗುತ್ತದೆ. ಜೊತೆಗೆ ನೂರು ಭಕ್ತರ ಒಂದೊಂದು ಗುಂಪುಗಳನ್ನ ಮಾಡಿ ಸಿಬ್ಬಂದಿಯೊಂದಿಗೆ ಕಳುಹಿಸಲು ನಿರ್ಧರಿಸಲಾಗಿದೆ.
ಅಲಿಪಿರಿ ಹಾಗೂ ತಿರುಮಲ ನಡುವಿನ 7ನೇ ಮೈಲಿಯಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡಲಾಗಿದೆ. ಮಕ್ಕಳು ಮತ್ತು ಶಿಶುಗಳ ಕೈಗೆ ಭದ್ರತಾ ಟ್ಯಾಗ್ ಅಳವಡಿಸಲಾಗುತ್ತದೆ. ಹಾಗೂ ಚೌಕಿಯಲ್ಲಿ ಪೋಷಕರ ವಿವರ ದಾಖಲಿಸಲಾಗುತ್ತದೆ.
ಪ್ರಾಣಿಗಳಿಗೆ ಆಹಾರ ಪದಾರ್ಥ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. 500 ಸಿಸಿಟಿವಿ ಕ್ಯಾಮೆರಾ, ಫೋಕಸ್ ಲೈಟ್‌ಗಳನ್ನು ಅಳವಡಿಸಲಾಗುತ್ತದೆ. ಇನ್ನು ಪಾದಚಾರಿ ಮಾರ್ಗದಲ್ಲಿ ಫೆನ್ಸಿಂಗ್ ಆಳವಡಿಕೆಗೆ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.