ಜರ್ಮನಿಯ ಯುವತಿ, ಕುಂದಾಪುರದ ಯುವಕನ ವಿವಾಹ: ವಿದೇಶದಲ್ಲಿ ಅರಳಿದ ಪ್ರೀತಿ ಭಾರತದಲ್ಲಿ ಒಂದಾಯ್ತು

ಕುಂದಾಪುರ: ಕುಂದಾಪುರ ತಾಲೂಕಿನ ಆಜ್ರಿ ಮೂಲದ ಯುವಕ ಹಾಗೂ ಜರ್ಮನಿಯ ಯುವತಿಯ ವಿವಾಹ ಜನವರಿ 1ರಂದು ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಆಜ್ರಿಯ ಕರಿಮನೆ ಸುವರ್ಣ ಮತ್ತು ಪಂಜುಪೂಜಾರಿ ದಂಪತಿಯ ಪುತ್ರ ಚಂದನ್ ಹಾಗೂ ಜರ್ಮನಿಯ ಪೆಟ್ರ ಶ್ರೋಆರ್ ಮತ್ತು ಪೀಟರ್ ಶ್ರೋಆರ್ ಮುನಿಸ್ತರ್ ಯುನಿಕಬ್ ದಂಪತಿಯ ಪುತ್ರಿ ಕಾರಿನ್ ಜೊತೆಯಾಗಿದ್ದಾರೆ.
ಜರ್ಮನಿಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಚಂದನ್ ಗೆ ಜರ್ಮನಿಯಲ್ಲಿ ಶಿಕ್ಷಕಿಯಾಗಿದ್ದ ಕಾರಿನ್ ಅವರ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗುತ್ತು. ತಮ್ಮ ಪ್ರೇಮದ ಬಗ್ಗೆ ಕುಟುಂಬಸ್ಥರ ಜೊತೆಗೆ ಜೋಡಿ ಮಾತನಾಡಿದ್ದು, ಈ ವೇಳೆ ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ಸೂಚಿಸಿವೆ.
ಅಂತೆಯೇ ವಿದೇಶಿ ನೆಲದಲ್ಲಿ ಅರಳಿದ ಪ್ರೀತಿ ಭಾರತದ ನೆಲದಲ್ಲಿ ಒಂದಾಗಿದ್ದು, ಚಂದನ್ ಮತ್ತು ಕಾರಿನ್ ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಧುವರರ ಕುಟುಂಬಸ್ಥರು ಬಂಧು ಮಿತ್ರರು ಮದುವೆಗೆ ಆಗಮಿಸಿ ನವವಧುವರರಿಗೆ ಶುಭಾಶಯ ತಿಳಿಸಿದರು.