ಜೆರೋಸಾ ಶಾಲೆಯ ಎದುರು ಗುಂಪುಗೂಡಿಸಿ ಪ್ರತಿಭಟನೆ: ಇಬ್ಬರು ಶಾಸಕರು ಸೇರಿದಂತೆ ಹಲವರ ವಿರುದ್ಧ ಎಫ್ ಐಆರ್

ಮಂಗಳೂರು: ಪ್ರತಿಭಟನೆಯ ಹೆಸರಿನಲ್ಲಿ ಮಂಗಳೂರಿನ ಜೆರೋಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಗುಂಪು ಗೂಡಿಸಿ, ಜೈಶ್ರೀರಾಮ್ ಘೋಷಣೆ ಕೂಗಿಸಿದ ಆರೋಪದಲ್ಲಿ ಬಿಜೆಪಿಯ ಇಬ್ಬರು ಶಾಸಕರಾದ ಮಂಗಳೂರು ದಕ್ಷಿಣದ ವೇದವ್ಯಾಸ್ ಕಾಮತ್ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಅಲ್ಲದೇ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್, ಪಾಲಿಕೆ ಸದಸ್ಯ ಸಂದೀಪ್ ಗರೋಡಿ, ಭರತ್ ಕುಮಾರ್ ಸೇರಿದಂತೆ ಹಲವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಅನಿಲ್ ಜೆರಾಲ್ಡ್ ಲೋಬೋ ಎಂಬವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಲೆಯ ಮುಂದೆ ಅಕ್ರಮ ಗುಂಪು ಕಟ್ಟಿ ಜೈಶ್ರೀರಾಮ್ ಘೋಷಣೆ ಕೂಗಿರೋದು, ಶಾಲಾ ಆಡಳಿತ ಮಂಡಳಿಯ ನಿಯಮ ಉಲ್ಲಂಘಿಸಲು ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿರೋದು ಹಾಗೂ ಕ್ರೈಸ್ತ ಧರ್ಮದ ವಿರುದ್ಧ ಮಾತನಾಡಿ, ಹಿಂದೂ, ಕ್ರೈಸ್ತರ ನಡುವೆ ಗಲಭೆ ಸೃಷ್ಟಿಸಲು ಪ್ರಚೋದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಡಾ.ಭರತ್ ಶೆಟ್ಟಿ:
ಮಂಗಳೂರಿನ ಜೆರೋಸಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾರೆ ಎನ್ನುವ ವಿಚಾರವನ್ನು ಶಾಸಕ ಭರತ್ ಶೆಟ್ಟಿ ಸದನದಲ್ಲಿ ಇಂದು ಪ್ರಸ್ತಾಪಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಭರತ್ ಶೆಟ್ಟಿ, ಶ್ರೀರಾಮನ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ ಶಿಕ್ಷಕಿ ವಿರುದ್ಧ ದೂರು ನೀಡಿದರೂ ಎಫ್ ಐಆರ್ ದಾಖಲಾಗಿಲ್ಲ. ಆದರೆ, ಸಂಸ್ಥೆಯ ಎದುರು ಪ್ರತಿಭಟನೆ ನಡೆಸಿದಾಗ ಜಾಮೀನು ರಹಿತ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಘಟನೆ ನಡೆದಾಗ ನಾನು ಆ ಸ್ಥಳದಲ್ಲಿ ಇರಲೇ ಇಲ್ಲ. ಆದರೂ ನನ್ನ ಮೇಲೆ ಹೇಗೆ ಎಫ್ ಐಆರ್ ಮಾಡಿದರು ಎಂದು ಭರತ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಧ್ಯ ಪ್ರವೇಶಿಸಿ, ಎಫ್ ಐಆರ್ ಹಾಕಿದ ಕೂಡಲೇ ಯಾರೂ ಅಪರಾಧಿಯಾಗೋದಿಲ್ಲ, ಶಾಲೆಯ ವಿಚಾರ ಮುಂದಿಟ್ಟು ಕೋಮುಭಾವನೆ ಕೆರಳಿಸಲು ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಭರತ್ ಶೆಟ್ಟಿ ಸ್ಥಳದಲ್ಲಿ ಇಲ್ಲದೇ ಇದ್ದರೂ ಎಫ್ ಐಆರ್ ದಾಖಲಾಗಿದೆ ಎಂದರೆ, ಪೊಲೀಸರಿಗೆ ಮೇಲಿನಿಂದ ಒತ್ತಡ ಹಾಕಲಾಗಿದೆ ಎಂದು ಆರೋಪಿಸಿದರಲ್ಲದೇ, ಎಫ್ ಐಆರ್ ದಾಖಲಿಸಿದ ಇನ್ಸ್ ಪೆಕ್ಟರ್ ನನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.