ನಿಲ್ಲದ ಕ್ರೂರ ದಾಳಿ: ಗಾಝಾದ ಅತಿದೊಡ್ಡ ಆಸ್ಪತ್ರೆ ಮೇಲೆ ಇಸ್ರೇಲ್ ನಿಂದ ಬಾಂಬ್ ದಾಳಿ; ಒದ್ದಾಡುತ್ತಿದೆ ನವಜಾತ ಶಿಶುಗಳು..!

13/11/2023

ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ ಮುಂದುವರೆದಿದೆ. ಗಾಝಾದ ಅತಿದೊಡ್ಡ ಆಸ್ಪತ್ರೆಯಾದ ಅಲ್-ಶಿಫಾವನ್ನು ಇಸ್ರೇಲ್ ಸೇನೆ ಸುತ್ತುವರೆದಿದೆ. ಈ ಆಸ್ಪತ್ರೆ ಸಮೀಪದಲ್ಲಿ ವೈಮಾನಿಕ ದಾಳಿ ಸೇರಿದಂತೆ ಬಾಂಬ್ ಸ್ಫೋಟಗಳು ನಡೆಯುತ್ತಿರುವುದರಿಂದ ಆಸ್ಪತ್ರೆಯ ಕಾರ್ಡಿಯಾಕ್ ವಾರ್ಡ್ ನಾಶವಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸಲ್ಮಿಯಾ ತಡರಾತ್ರಿ ಹೇಳಿಕೆ ನೀಡಿದ್ದಾರೆ.

ಆಸ್ಪತ್ರೆಯೊಳಗೆ ಶಸ್ತ್ರಚಿಕಿತ್ಸೆಯಾದ 600 ರೋಗಿಗಳು, 37 ರಿಂದ 40 ಶಿಶುಗಳು ಮತ್ತು 17 ಜನರು ತೀವ್ರ ನಿಗಾ ಘಟಕದಲ್ಲಿದ್ದು, ಅವರಿಗೆ ನೀರು, ವಿದ್ಯುತ್, ಆಹಾರ ಅಥವಾ ಇಂಟರ್ ನೆಟ್ ದೊರೆಯದಂತಾಗಿದೆ. ಅಪಾರ ಸಂಖ್ಯೆಯ ಜನರು ಆಸ್ಪತ್ರೆಯ ಆವರಣದಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಶಸ್ತ್ರಚಿಕಿತ್ಸಕ ಮೊಹಮ್ಮದ್ ಒಬೇದ್ ಹೇಳಿದ್ದಾರೆ.

‘ಕದನ ವಿರಾಮದೊಂದಿಗೆ ತಕ್ಷಣವೇ ಈ ರಕ್ತಪಾತವನ್ನು ನಿಲ್ಲಿಸದಿದ್ದರೆ ಅಥವಾ ರೋಗಿಗಳ ವೈದ್ಯಕೀಯ ಸ್ಥಳಾಂತರಿಸುವಿಕೆಯನ್ನು ನಿಲ್ಲಿಸದಿದ್ದರೆ, ಈ ಆಸ್ಪತ್ರೆಗಳು ಶವಾಗಾರವಾಗುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇಸ್ರೇಲಿ ಪಡೆಗಳು ಮತ್ತು ಹಮಾಸ್ ನಡುವಿನ ಭಾರೀ ಹೋರಾಟದಲ್ಲಿ ಗಾಜಾದ ಆಸ್ಪತ್ರೆಗಳಲ್ಲಿ ಸಾವಿರಾರು ಜನರು ಸಿಕ್ಕಿಬಿದ್ದಿದ್ದಾರೆ. ಕದನ ವಿರಾಮ ಇಲ್ಲದಿದ್ದರೆ ರೋಗಿಗಳಿಗೆ ಸೌಲಭ್ಯ ದೊರೆಯದೆ ಸಾಯುತ್ತಾರೆ ಎಂದು ವೈದ್ಯರು ಮತ್ತು ಸಹಾಯ ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಇನ್ನು ಇನ್‌ಕ್ಯುಬೇಟರ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡ ನಂತರ ಅಲ್-ಶಿಫಾ ಆಸ್ಪತ್ರೆಯ ನವಜಾತ ಘಟಕದಲ್ಲಿದ್ದ ಎರಡು ಶಿಶುಗಳು ಸಾವನ್ನಪ್ಪಿವೆ. ವೆಂಟಿಲೇಟರ್ ಸ್ಥಗಿತಗೊಂಡಾಗ ಒಬ್ಬ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ.

ಇತ್ತೀಚಿನ ಸುದ್ದಿ

Exit mobile version