ಮಾನವೀಯ ನೆಲೆಯಲ್ಲಿ ಇಬ್ಬರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಗಾಝಾ ಪಟ್ಟಿಯಲ್ಲಿದ್ದ ಇಬ್ಬರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್ ಪ್ರಕಟಿಸಿದೆ. ಮಾನವೀಯ ನೆಲೆಯಲ್ಲಿ ಇಬ್ಬರು ವೃದ್ಧ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಫೆಲೆಸ್ತೀನ್ ಗುಂಪು ಹೇಳಿದೆ.
ಮಾನವೀಯ ನೆಲೆಯಲ್ಲಿ ಹಾಗೂ ಅವರ ಕಳಪೆ ಆರೋಗ್ಯ ಕಾರಣಗಳಿಗಾಗಿ ಅವರನ್ನು ಬಿಡುಗಡೆ ಮಾಡಲು ನಾವು ನಿರ್ಧರಿಸಿದ್ದೇವೆ. ಅದರ ಹೊರತಾಗಿಯೂ ಕಳೆದ ಶುಕ್ರವಾರ ಶತ್ರುಗಳು ಅವರನ್ನು ಸ್ವೀಕರಿಸಲು ನಿರಾಕರಿಸಿದ್ದರು ಎಂದು ಹಮಾಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬಿಡುಗಡೆಯಾದ ಒತ್ತೆಯಾಳುಗಳನ್ನು ನುರಿಟ್ ಕೂಪರ್ (79) ಮತ್ತು ಯೋಚೆವೆಡ್ ಲಿಫ್ಶಿಟ್ಜ್ (85) ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ. ಗಾಝಾ ಗಡಿಯ ಬಳಿಯ ನಿರ್ ಓಜ್ನ ಕಿಬ್ಬಟ್ಜ್‌ನಲ್ಲಿ ಮಹಿಳೆಯರು ಮತ್ತು ಅವರ ಗಂಡಂದಿರನ್ನು ತಮ್ಮ ಮನೆಗಳಿಂದ ಒತ್ತೆಯಾಳುಗಳಾಗಿ ತೆಗೆದುಕೊಳ್ಳಲಾಗಿದೆ. ಅವರ ಗಂಡಂದಿರನ್ನು ಬಿಡುಗಡೆ ಮಾಡಿಲ್ಲ.
ಆದರೆ ಈ ಕುರಿತು ಇಸ್ರೇಲಿ ಕಡೆಯಿಂದ ಯಾವುದೇ ಔಪಚಾರಿಕ ಪ್ರಕಟಣೆ ಬಂದಿಲ್ಲ. ವೃದ್ದರನ್ನು ಗಾಝಾದಿಂದ ಹೊರಗೆ ಕಳಿಸಲಾಯಿತಿ. ಬಿಡುಗಡೆಗೊಂಡ ಸೆರೆಯಾಳುಗಳು ಈಜಿಪ್ಟ್ ರಫಾ ಕ್ರಾಸಿಂಗ್ ಗೆ ಆಗಮಿಸಿದ್ದಾರೆ ಎಂದು ಈಜಿಪ್ಟ್ ಸುದ್ದಿ ಸಂಸ್ಥೆ ಸೋಮವಾರ ತಡರಾತ್ರಿ ವರದಿ ಮಾಡಿದೆ.
ಗಾಝಾ ಪಟ್ಟಿಯಿಂದ ಇಬ್ಬರು ಮಹಿಳೆಯರನ್ನು ಬಿಡುಗಡೆ ಮಾಡುವಲ್ಲಿ ಈಜಿಪ್ಟ್ ನ ಪ್ರಯತ್ನಗಳು ಯಶಸ್ವಿಯಾಗಿವೆ ಎಂದು ಸಂಸ್ಥೆ ತಿಳಿಸಿದೆ.