ಚಿಕ್ಕಮಗಳೂರು: ಬಿಲ್ಡಿಂಗ್ ಮೇಲೆ ನಿಂತು ಆತ್ಮಹತ್ಯೆ ಡ್ರಾಮಾ; ಪೊಲೀಸರಿಗೇ ಇಟ್ಟಿಗೆಯಿಂದ ಹೊಡೆಯಲು ಮುಂದಾದ ವ್ಯಕ್ತಿಯ ರಕ್ಷಣೆ!
ಚಿಕ್ಕಮಗಳೂರು: ಜಿಲ್ಲಾ ಕೇಂದ್ರದ ಹೃದಯಭಾಗವಾದ ನೆಹರೂ ರಸ್ತೆಯಲ್ಲಿ ಇಂದು ಹೈಡ್ರಾಮಾವೊಂದು ನಡೆದಿದೆ. ಎರಡು ಅಂತಸ್ತಿನ ಕಟ್ಟಡದ ಮೇಲೆ ನಿಂತು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದ ಘಟನೆ ನಡೆದಿದೆ.
ಏನಿದು ಘಟನೆ?
ಹಾಸನ ಜಿಲ್ಲೆಯ ಬೇಲೂರು ಮೂಲದ ಗಣೇಶ್ ಎಂಬ ವ್ಯಕ್ತಿ ಚಿಕ್ಕಮಗಳೂರು ನಗರದ ನೆಹರೂ ರಸ್ತೆಯ ಕಟ್ಟಡವೊಂದರ ಮೇಲೆ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಕಟ್ಟಡದ ತುದಿಯಲ್ಲಿ ನಿಂತು ಈತ ನಡೆಸಿದ ರಾದ್ಧಾಂತದಿಂದಾಗಿ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು.
ಪೊಲೀಸರಿಗೇ ಆವಾಜ್ ಹಾಕಿದ!
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆತನನ್ನು ಕೆಳಗಿಳಿಸಲು ಪ್ರಯತ್ನಿಸಿದರು. ಆದರೆ, ಕೈನಲ್ಲಿ ಇಟ್ಟಿಗೆ ಹಾಗೂ ಮಾಪ್ ಕೋಲು ಹಿಡಿದಿದ್ದ ಗಣೇಶ್, “ಯಾರಾದರೂ ಹತ್ತಿರ ಬಂದರೆ ಕೆಳಕ್ಕೆ ಬೀಳುತ್ತೇನೆ” ಎಂದು ಧಮ್ಕಿ ಹಾಕಿದ್ದಾನೆ. ಅಷ್ಟೇ ಅಲ್ಲದೆ, ತನ್ನ ರಕ್ಷಣೆಗೆ ಮುಂದಾದ ಅಧಿಕಾರಿಗಳಿಗೇ ಇಟ್ಟಿಗೆಯಿಂದ ಹೊಡೆಯುವುದಾಗಿ ಎಚ್ಚರಿಕೆ ನೀಡಿ ಆವಾಜ್ ಹಾಕಿದ್ದಾನೆ.
ಕಾರ್ಯಾಚರಣೆ ಯಶಸ್ವಿ
ಪೊಲೀಸರು ಒಂದು ಕಡೆಯಿಂದ ಮಾತುಕತೆಯಲ್ಲಿ ಆತನ ಗಮನ ಸೆಳೆಯುತ್ತಿದ್ದರೆ, ಮತ್ತೊಂದೆಡೆ ಅಗ್ನಿಶಾಮಕ ಸಿಬ್ಬಂದಿಗಳು ಚಾಣಾಕ್ಷತನ ಮೆರೆದಿದ್ದಾರೆ. ಕಟ್ಟಡದ ಹಿಂಭಾಗದಿಂದ ಗುಟ್ಟಾಗಿ ಹತ್ತಿದ ಸಿಬ್ಬಂದಿಗಳು, ಗಣೇಶ್ ಎಚ್ಚರ ತಪ್ಪಿದ ಕ್ಷಣದಲ್ಲಿ ಆತನನ್ನು ಹಿಡಿದು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತನ ಈ ಕೃತ್ಯದ ಹಿಂದಿನ ಕಾರಣವೇನು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಬಿಗುವಿನ ವಾತಾವರಣ ನಿರ್ಮಾಣವಾಗಿದ್ದ ನೆಹರೂ ರಸ್ತೆಯಲ್ಲಿ ಈಗ ಪರಿಸ್ಥಿತಿ ತಿಳಿಯಾಗಿದೆ.
ಗಮನಿಸಿ: ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ನಿಮಗೆ ಯಾವುದಾದರೂ ಮಾನಸಿಕ ಸಮಸ್ಯೆಗಳಿದ್ದರೆ ಅಥವಾ ಖಿನ್ನತೆಯಲ್ಲಿದ್ದರೆ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 104 ಕ್ಕೆ ಕರೆ ಮಾಡಿ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























