ವಿಧವೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿ, ಅತ್ಯಾಚಾರ: ಬಾಂಗ್ಲಾದೇಶದಲ್ಲಿ ಅಮಾನವೀಯ ಕೃತ್ಯ
ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಜಿನೈದಾ (Jhenaidah) ಜಿಲ್ಲೆಯಲ್ಲಿ ಹಿಂದೂ ವಿಧವೆಯೊಬ್ಬರ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿ ಹಾಕಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳು ಮಹಿಳೆಯ ಕೂದಲನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ.
ಘಟನೆಯ ವಿವರ: ಶನಿವಾರ ರಾತ್ರಿ ಜಿನೈದಾ ಜಿಲ್ಲೆಯ ಕಾಲಿಗಂಜ್ ಮುನ್ಸಿಪಲ್ ವ್ಯಾಪ್ತಿಯ ನಂದಿಪಾರಾದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ 40 ವರ್ಷದ ಮಹಿಳೆ ಕಳೆದ ಎರಡು ವರ್ಷಗಳಿಂದ ಶಾಹಿನ್ ಎಂಬಾತನಿಂದ ಕಿರುಕುಳ ಅನುಭವಿಸುತ್ತಿದ್ದರು ಎನ್ನಲಾಗಿದೆ. ಎರಡು ವರ್ಷಗಳ ಹಿಂದೆ ಮಹಿಳೆಯು ಶಾಹಿನ್ ಮತ್ತು ಆತನ ಸಹೋದರನಿಂದ ಸುಮಾರು 20 ಲಕ್ಷ ಟಾಕಾ ನೀಡಿ ಮನೆ ಮತ್ತು ಭೂಮಿಯನ್ನು ಖರೀದಿಸಿದ್ದರು. ಅಂದಿನಿಂದ ಶಾಹಿನ್ ಆಕೆಯ ಮೇಲೆ ಕಣ್ಣು ಹಾಕಿದ್ದು, ನಿರಂತರವಾಗಿ ಅಸಭ್ಯವಾಗಿ ವರ್ತಿಸುತ್ತಾ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಆರೋಪಿ ಶಾಹಿನ್ ಮತ್ತು ಆತನ ಸಹಚರರು ಮಹಿಳೆಯನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ, ಮನಬಂದಂತೆ ಥಳಿಸಿ ಅತ್ಯಾಚಾರ ಎಸಗಿದ್ದಾರೆ. ನಂತರ ಆಕೆಯ ಕೂದಲನ್ನು ಕತ್ತರಿಸಿ ಅವಮಾನಿಸಿದ್ದಾರೆ. ಹಲ್ಲೆಯ ತೀವ್ರತೆಗೆ ಮಹಿಳೆ ಪ್ರಜ್ಞೆ ತಪ್ಪಿದ್ದು, ಸ್ಥಳೀಯರು ಆಕೆಯನ್ನು ರಕ್ಷಿಸಿ ಜಿನೈದಾ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತನಿಖೆ ಮತ್ತು ಬಂಧನ: ಆಸ್ಪತ್ರೆಯ ವೈದ್ಯಕೀಯ ಪರೀಕ್ಷೆಯ ನಂತರ ಮಹಿಳೆಯ ಮೇಲೆ ದೈಹಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಕಾಲಿಗಂಜ್ ಪೊಲೀಸರು ಕಾರ್ಯಾಚರಣೆ ನಡೆಸಿ ಮುಖ್ಯ ಆರೋಪಿ ಶಾಹಿನ್ ಮತ್ತು ಆತನ ಸಹಚರನನ್ನು ಬಂಧಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಆಸ್ತಿ ಪಾಸ್ತಿಗಳನ್ನು ಗುರಿ ಮಾಡುವುದು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಪ್ರಕರಣಗಳು ಹೆಚ್ಚುತ್ತಿರುವುದು ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























