ನೀವು ಕಾರ್ಯಕರ್ತರು, ಮತದಾರರ ಮನಗೆಲ್ಲಿ, ನಾವು ನಾಯಕರುಗಳನ್ನು ನಿಭಾಯಿಸುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

dk shivakumar
21/08/2023

ಬೆಂಗಳೂರು: “ನೀವು ಕಾರ್ಯಕರ್ತರು, ಮತದಾರರ ಮನ ಗೆಲ್ಲುವತ್ತ ಗಮನ ಹರಿಸಿ. ನಾಯಕರ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ” ಎಂದು ಕೆಪಿಸಿಸಿ ಅಧ್ಯಕ್ಷರೂ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕರೆ ನೀಡಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಸೋಮವಾರ ನಡೆದ ಯಶವಂತಪುರ ವಿಧಾನಸಭಾ ಕ್ಷೇತ್ರದ ಅನ್ಯಪಕ್ಷಗಳ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;

“ಕಾಂಗ್ರೆಸ್ ಪಕ್ಷ ಕರ್ನಾಟಕದ ಜನರ ಬದುಕನ್ನು ರೂಪಿಸುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳು ತಲುಪದ ಜನರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಲು ಭಾರತ್ ಜೋಡೋ ಸಭಾಂಗಣದಲ್ಲಿ ನಾವೆಲ್ಲಾ ಜೊತೆಯಾಗಿದ್ದೇವೆ. ನಮ್ಮ ಬಂಧ ಗಟ್ಟಿಯಾಗಿ ಕೋಮುವಾದಿ ಶಕ್ತಿಗಳನ್ನು ಓಡಿಸೋಣ.

ಕಾಂಗ್ರೆಸ್ ಪಕ್ಷದ ರಕ್ತ ಸಾಮಾನ್ಯವಾದದ್ದಲ್ಲ ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ, ಕಾಂಗ್ರೆಸ್ಸಿಗನಾಗುವುದೆಂದರೆ ಅದು ಅಭಿಮಾನದ ಸಂಕೇತ. ಈ ರಾಷ್ಟ್ರ ಧ್ವಜ ಯಾರ ಹೆಗಲ ಮೇಲಿದೆ ಎಂದರೆ ಅದು ಕಾಂಗ್ರೆಸ್ಸಿಗರ ಹೆಗಲ ಮೇಲೆ ಮಾತ್ರ.  ನಾವೆಲ್ಲಾ ಅಭಿಮಾನದಿಂದ ಕಾಂಗ್ರೆಸ್ಸಿಗರು ಎಂದು ಹೇಳಿಕೊಳ್ಳಬೇಕು.

ಈ ದೇಶದ ಬಡ ಜನರಿಗೆ ಅನುಕೂಲವಾಗುವಂತಹ ನೀತಿಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಉಳುವವನೆ ಭೂಮಿಯ ಒಡೆಯ, ಬ್ಯಾಂಕ್‌ಗಳ ರಾಷ್ಟ್ರೀಕರಣ, ಪಡಿತರ ವ್ಯವಸ್ಥೆ, ಪಂಚಾಯತ್ ರಾಜ್ ಸೇರಿದಂತೆ ನಾವೆಲ್ಲಾ ಯಾವುದರ ಫಲಾನುಭವಿಗಳಾಗಿ ಬೆಳೆದಿದ್ದೇವೊ ಅದೆಲ್ಲ ಕಾಂಗ್ರೆಸ್ ಪಕ್ಷದ ಕೊಡುಗೆ.

ಜನ ನೆನಪು ಮಾಡಿಕೊಳ್ಳುವಂತಹ ಒಂದೇ ಒಂದು ಕಾರ್ಯಕ್ರಮ ಕೊಟ್ಟಿಲ್ಲ ಬಿಜೆಪಿ. ಬರೀ ಬೆಲೆ ಏರಿಕೆ ಭಾಗ್ಯ ಕೊಟ್ಟಿದೆ. ಬಡವರ ಬಗ್ಗೆ ಚಿಂತೆ ಇಲ್ಲ, ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಮೋದಿಯವರು ಗ್ಯಾಸ್ ಕೊಡುತ್ತೇನೆ ಎಂದು ಬಡ ಹೆಣ್ಣು ಮಕ್ಕಳ ಫೋಟೊ ಹಾಕಿದ್ದಷ್ಟೇ ಸಾಧನೆ. ಇದೇ ಕಾರಣಕ್ಕೆ ನಾವು ಜನರಿಂದ ಮಾಡುತ್ತಿರುವ ಲೂಟಿಯನ್ನು ತಡೆಯಲು ಗ್ಯಾರಂಟಿ ಯೋಜನೆಗಳನ್ನು ತಂದಿರುವುದು. ನೀವು ಇದನ್ನು ಮನೆ,‌ ಮನಗಳಿಗೆ ತಲುಪಿಸಿ.

ಇಂದಿರಾ ಕ್ಯಾಂಟೀನ್ ಎಂದು ಹೆಸರಿಡಬೇಕು ಎಂದು ಇದೇ ಎಸ್‌.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು ಅವರು ಹಠ ಮಾಡಿ 40 ಜನ ಎಂಎಲ್‌ಎಗಳ ಸಹಿ ಹಾಕಿಸಿ ಕೊಟ್ಟಿದ್ದರು. ಅವರ ಕ್ಷೇತ್ರಗಳ ಜನರ ಮನೆಯ ಮೇಲೆ ಕಾಂಗ್ರೆಸ್ ಧ್ವಜದ ಚಿತ್ರಗಳನ್ನು ಹಾಕಿಸಿದ್ದರು. ಈಗ ಪೂರ್ತಿ ಕೇಸರಿ ಬಣ್ಣ ಬಳಿದಿದ್ದಾರೆ.

ಯುವ ಸಮಾವೇಶದ ಸಲುವಾಗಿ ದೆಹಲಿಗೆ ಹೋಗಿದ್ದಾಗ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಲು ಕಾಯುತ್ತಿದ್ದೆವು, ಅಲ್ಲಿಗೆ ಹಿರಿಯ ನಾಯಕರೊಬ್ಬರು ಬಂದರು, ಅವರನ್ನು ಸ್ವತಃ ರಾಜೀವ್ ಗಾಂಧಿ ಅವರೇ ಹೋಗಿ ಕರೆದುಕೊಂಡು ಬಂದರು. ನಾವೆಲ್ಲ ಯಾರು ಎಂದು ಕುತೂಹಲದಿಂದ ಕೇಳಿದೆವು. ಅವರು ಬಾಬು ಜಗಜೀವನ್ ರಾಮ್. ನೆಹರು, ಇಂದಿರಾ ಗಾಂಧಿ ಅವರ ಜೊತೆ ಕೆಲಸ ಮಾಡಿದವರು. ಅನಿವಾರ್ಯ ಕಾರಣಗಳಿಂದ ಪಕ್ಷ ಬಿಟ್ಟು ಹೋಗಿದ್ದರು, ಈಗ ಪಕ್ಷಕ್ಕೆ ಮತ್ತೆ ಸೇರಬೇಕಂತೆ, ಕಾಂಗ್ರೆಸ್ಸಿಗನಾಗಿ ನಾನು ಪ್ರಾಣ ಬಿಡುವ ನನ್ನ ಆಸೆ ಎಂದು ಹೇಳಿದರಂತೆ ಈ ಘಟನೆ ಕೇಳಿದ ನಮಗೆ ಪಕ್ಷದಲ್ಲಿ ಇರುವ ನಾವೆಲ್ಲಾ ಪುಣ್ಯವಂತರು ಎಂದು ಅನಿಸಿತು.

ಅಕ್ಬರ್ ಬಿರ್‌ಬಲ್ಲನಿಗೆ ಕೇಳಿದರಂತೆ ಏಕೆ ಮನುಷ್ಯನಿಗೆ ಅಂಗೈಯಲ್ಲಿ ಕೂದಲು ಇಲ್ಲ ಎಂದು, ಅದಕ್ಕೆ ಬೀರ್ ಬಲ್ ಹೇಳಿದನಂತೆ, “ನೀವು ದೊರೆಗಳಾದ ಕಾರಣ ದಾನ ಕೊಟ್ಟು, ಕೊಟ್ಟು ಅಂಗೈಯಲ್ಲಿ ಕೂದಲಿಲ್ಲ, ಇವರೆಲ್ಲಾ ತೆಗೆದುಕೊಳ್ಳುವವರು ಅದಕ್ಕೆ ಅವರ ಅಂಗೈಯಲ್ಲೂ ಕೂದಲಿಲ್ಲ, ಹಾಗಾದರೆ ಜನರ ಅಂಗೈಯಲ್ಲಿ ಏಕೆ ಕೂದಲಿಲ್ಲ ಎಂದು ಮರು ಪ್ರಶ್ನೆ ಹಾಕಿದರಂತೆ ಅಕ್ಬರ್ “ನಮಗೆ ಸಿಗಲಿಲ್ಲ ಎಂದು ಕೈ, ಕೈ ಹೊಸಕಿಕೊಳ್ಳುವ ಕಾರಣ ಕೂದಲಿಲ್ಲ” ಎಂದು ಹೇಳಿದ್ದ. ಇದು ಪರಿಸ್ಥಿತಿ ಬಿಜೆಪಿಯವರದ್ದಾಗಿದೆ, ನಾವು ಗ್ಯಾರಂಟಿ ಕೊಟ್ಟ ನಂತರ ಕೈ, ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version